ಬೆಂಗಳೂರು: ಆರ್ಥಿಕ ಸಂಕಷ್ಟದ ಹಿನ್ನೆಲೆ ರಾಜ್ಯ ಸರ್ಕಾರ ವೆಚ್ಚ , ಹುದ್ದೆ ಕಡಿತದ ಕ್ರಮಕ್ಕೆ ಮುಂದಾಗಿದೆ. ಅಷ್ಟಕ್ಕೂ ರಾಜ್ಯ ಸರ್ಕಾರ ಆಡಳಿತ ಸುಧಾರಣೆಗಾಗಿ ವೆಚ್ಚ ಕಡಿತದ ಲೆಕ್ಕಾಚಾರ ಮಾಡಲು ಕಾರಣವೇನು?. ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ವೇತನ, ಪಿಂಚಣಿ ಸೇರಿ ಒಟ್ಟು ಬಾಧ್ಯತಾ ವೆಚ್ಚ ಏನು ಎಂಬ ಬಗ್ಗೆ ಸಮಗ್ರ ವರದಿ ಇಲ್ಲಿದೆ.
ಲಾಕ್‌ಡೌನ್ ಹಿನ್ನೆಲೆ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟು ಹೋಗಿದೆ. ಹೀಗಾಗಿ ಸರ್ಕಾರ ನಾನಾ ಸಂಪನ್ಮೂಲ ಕ್ರೋಢೀಕರಣ ಕ್ರಮಗಳ ಜೊತೆಗೆ ವೆಚ್ಚ, ಹುದ್ದೆ ಕಡಿತಕ್ಕೂ ಮುಂದಾಗಿದೆ. ಈ ಹಿನ್ನೆಲೆ ಈಗಾಗಲೇ ರಾಜ್ಯ ಸರ್ಕಾರ ಹುದ್ದೆ ಕಡಿತ, ಇಲಾಖೆಗಳ ವಿಲೀನದ ಪ್ರಕ್ರಿಯೆಗೆ ಚಾಲನೆ ನೀಡಿದೆ. ರಾಜ್ಯ ಸರ್ಕಾರ ಆಡಳಿತ ಸುಧಾರಣೆ ನಿಟ್ಟಿನಲ್ಲಿ ಅನಗತ್ಯ ಹುದ್ದೆ ಕಡಿತ, ಇಲಾಖೆಗಳ ವಿಲೀನ, ಆಡಳಿತ ವೆಚ್ಚ ಕಡಿತಕ್ಕೆ ಮುಂದಾಗಿದೆ. ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆ, ಪಿಂಚಣಿ, ಬಡ್ಡಿ ಒಳಗೊಂಡಂತೆ ಬಾಧ್ಯತಾ ವೆಚ್ಚದ ರೂಪದಲ್ಲಿ ಸರ್ಕಾರ ಪ್ರತಿ ವರ್ಷ ತನ್ನ ಬಜೆಟ್ ನಲ್ಲಿ ಬಹುಪಾಲು ವ್ಯಯಿಸುತ್ತಿದೆ.
ವೇತನ, ಪಿಂಚಣಿಯ ಬಾಧ್ಯತಾ ವೆಚ್ಚ ಹೊರೆ ಏನು? ಬಾಧ್ಯತಾ ವೆಚ್ಚ ಅಂದರೆ ರಾಜ್ಯ ಸರ್ಕಾರ ತನ್ನ ನೌಕರರಿಗೆ ಕೊಡುವ ವೇತನ, ಪಿಂಚಣಿ, ಭತ್ಯೆ ಮತ್ತು ಬಡ್ಡಿ ಒಳಗೊಂಡಿದೆ. ಸರ್ಕಾರ ತನ್ನ ಬಜೆಟ್‌ನ ಬಹುಪಾಲನ್ನು ಬಾಧ್ಯತಾ ವೆಚ್ಚಕ್ಕೆ ಮೀಸಲಿರಿಸುತ್ತದೆ.
2020 - 21ರಲ್ಲಿ ರಾಜ್ಯ ಸರ್ಕಾರ 81,718 ಕೋಟಿ ರೂ. ಬಾಧ್ಯತಾ ವೆಚ್ಚದ ಅಂದಾಜು ಮಾಡಿದೆ. ಇದರಲ್ಲಿ ವೇತನ ಮತ್ತು ಭತ್ಯೆ ರೂಪದಲ್ಲಿ ಶೇ 21ರಷ್ಟು, ಪಿಂಚಣಿ ಶೇ 9, ಆಡಳಿತ ವೆಚ್ಚ ಶೇ2, ಸಹಾಯಧನ ಶೇ.10, ಸಾಮಾಜಿಕ ಭದ್ರತೆ ಪಿಂಚಣಿ ಶೇ 3 ಒಳಗೊಂಡಿದೆ. ಅಂದರೆ ಒಟ್ಟು ರಾಜಸ್ವ ಜಮೆ ಅಥವಾ ಆದಾಯ (revenue receipts)ದ ಶೇ 45ರಷ್ಟನ್ನು ಬಾಧ್ಯತಾ ವೆಚ್ಚಕ್ಕೆ ವ್ಯಯಿಸಲಾಗುತ್ತಿದೆ. 2020-21 ಬಜೆಟ್ ನಲ್ಲಿ ರಾಜ್ಯದ ಒಟ್ಟು ರಾಜಸ್ವ ಜಮೆ 1,79,919 ಕೋಟಿ ರೂ. ಅಂದಾಜಿಸಲಾಗಿದೆ. ಇದರಲ್ಲಿ ಸರ್ಕಾರ ವೇತನಕ್ಕಾಗಿ 37,291 ಕೋಟಿ ರೂ., ಪಿಂಚಣಿಗಾಗಿ 22,211 ಕೋಟಿ ರೂ. ಮೀಸಲಿರಿಸಿದೆ.
ಅಂದರೆ ಬಾಧ್ಯತಾ ವೆಚ್ಚದ ಬಳಿಕ ರಾಜಸ್ವ ಜಮೆಯ ಶೇ 55ರಷ್ಟು ಮಾತ್ರ ಇತರ ವೆಚ್ಚಗಳನ್ನು ಭರಿಸಲು ಉಳಿಯುತ್ತದೆ. ಹೆಚ್ಚುವರಿ ವೆಚ್ಚವನ್ನು ಭರಿಸಬೇಕಾದರೆ ಸರ್ಕಾರ ಸಾಲದ ಮೊರೆ ಹೋಗುತ್ತದೆ. 2019-20ಗೆ ಹೋಲಿಸಿದರೆ ಈ ಆರ್ಥಿಕ ವರ್ಷದಲ್ಲಿ ಭಾದ್ಯತಾ ವೆಚ್ಚ ಶೇ 13.8 ರಷ್ಟು ಏರಿಕೆಯಾಗಲಿದೆ ಎಂದು ರಾಜ್ಯ ವಾರ್ಷಿಕ ಹಣಕಾಸು ಅಂಕಿ- ಅಂಶದಲ್ಲಿ ತಿಳಿಸಲಾಗಿದೆ.
ಬಜೆಟ್ ಹಂಚಿಕೆಯಲ್ಲಿ ಬಾಧ್ಯತಾ ವೆಚ್ಚಕ್ಕಾಗಿ ಹೆಚ್ಚಿನ ಪ್ರಮಾಣ ವ್ಯಯಿಸುವುದರಿಂದ ಸರ್ಕಾರಕ್ಕೆ ಇತರ ಆದ್ಯತಾ ಖರ್ಚು, ವೆಚ್ಚಗಳಿಗೆ ಹಣ ವ್ಯಯಿಸುವ ಆಯ್ಕೆಯನ್ನು ಸೀಮಿತಗೊಳಿಸುತ್ತಿದೆ. ಅದಕ್ಕಾಗಿನೇ ಈ ಬಾರಿ ಲಾಕ್ ಡೌನ್ ಹಿನ್ನೆಲೆ ಬೊಕ್ಕಸ ಖಾಲಿಯಾಗಿರುವುದರಿಂದ ಸರ್ಕಾರ ಹುದ್ದೆ ಕಡಿತ, ಆಡಳಿತ ವೆಚ್ಚ ಕಡಿತದ ಮೂಲಕ ಬಾಧ್ಯತಾ ವೆಚ್ಚವನ್ನು ಕಡಿಮೆ ಮಾಡಲು ಗಂಭೀರ ಚಿಂತನೆ ನಡೆಸಿದೆ.
ನೆರೆ ರಾಜ್ಯಗಳ ಬಾಧ್ಯತಾ ವೆಚ್ಚ ಎಷ್ಟಿದೆ..?: ನೆರೆ ರಾಜ್ಯ ಕೇರಳ 2020-21 ಸಾಲಿನಲ್ಲಿ ಬಾಧ್ಯತಾ ವೆಚ್ಚಕ್ಕಾಗಿ ಸುಮಾರು 73,845 ಕೋಟಿ ರೂ. ವ್ಯಯಿಸುತ್ತಿದೆ. ಇದು ಕೇರಳದ ರಾಜಸ್ವ ಜಮೆಯ ಶೇ 64ರಷ್ಟು ಆಗಿದೆ.
ಇನ್ನು ತಮಿಳುನಾಡು ಈ ಸಾಲಿನಲ್ಲಿ ಬಾಧ್ಯತಾ ವೆಚ್ಚದ ರೂಪದಲ್ಲಿ ಅಂದಾಜು 1,36,098 ಕೋಟಿ ರೂ. ವ್ಯಯಿಸಲಿದೆ. ಇದು ತಮಿಳುನಾಡು ರಾಜಸ್ವ ಜಮೆಯ ಶೇ 62 ರಷ್ಟು ಆಗಿದೆ.
ಇನ್ನು ಮಹಾರಾಷ್ಟ್ರ 2020-21 ಸಾಲಲ್ಲಿ ಬಾಧ್ಯತಾ ವೆಚ್ಚಕ್ಕಾಗಿ ಅಂದಾಜು 1,91,451 ಕೋಟಿ ರೂ. ವ್ಯಯಿಸಲಿದೆ. ಇದು ಮಹಾರಾಷ್ಟ್ರದ ರಾಜಸ್ವ ಜಮೆಯ ಶೇ 55ರಷ್ಟು ಆಗಿದೆ.
ಪರ-ವಿರೋಧ: ಆಡಳಿತ ಸುಧಾರಣೆ ಕ್ರಮವನ್ನು ಸಮರ್ಥಿಸಿರುವ ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ, ರಾಜ್ಯದ ಬಹುತೇಕ ಆದಾಯ ವೇತನ, ಪಿಂಚಣಿಗೆ ಹೋಗುತ್ತಿದೆ. ಇತರ ಅಭಿವೃದ್ಧಿ ಕೆಲಸಕ್ಕೆ ಸಿಗುವ ಹಣ ಭಾರಿ ಕಡಿಮೆ ಇದೆ. ಹೀಗಾಗಿ ವೆಚ್ಚ ಕಡಿತ ಅಗತ್ಯ ಇದೆ ಎಂದು ಈ ಟಿವಿ ಭಾರತ್ ಗೆ ತಿಳಿಸಿದ್ದಾರೆ.
ಇತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಿ.ಗುರುಸ್ವಾಮಿ ಸರ್ಕಾರದ ನಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ನೆರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಆಡಳಿತ ವೆಚ್ಚ ಕಡಿಮೆ ಇದೆ. ನಮ್ಮಲ್ಲಿ ಮೊದಲೇ ಹುದ್ದೆಗಳು ಭರ್ತಿಯಾಗದೆ ಖಾಲಿ ಇದ್ದು, ಇಬ್ಬರು ಮೂವರ ಕೆಲಸ ಒಬ್ಬರೇ ಮಾಡುತ್ತಿದ್ದೇವೆ. ಆದ್ದರಿಂದ ಆಡಳಿತ ವೆಚ್ಚ ಇನ್ನಷ್ಟು ಕಡಿತ ಮಾಡುವುದು ತಪ್ಪು ಎಂದು ವಿರೋಧಿಸಿದ್ದಾರೆ.