ಶಿವಮೊಗ್ಗ : ಭದ್ರಾವತಿಯಲ್ಲಿ ವಿಐಎಸ್‍ಎಲ್ ಅಧೀನದಲ್ಲಿರುವ ಆಕ್ಸಿಜನ್ ತಯಾರಿಕಾ ಘಟಕವನ್ನು ಸಕ್ರಿಯಗೊಳಿಸಲು ನಿರ್ಧರಿಸಲಾಗಿದ್ದು, ವಾರದೊಳಗಾಗಿ ಉತ್ಪಾದನೆ ಆರಂಭವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಐಎಸ್‍ಎಲ್ ಅವರೊಂದಿಗೆ ಎಂಎಸ್‍ಪಿಎಲ್ ಸಂಸ್ಥೆ ಆಕ್ಸಿಜನ್ ಉತ್ಪಾದಿಸಿಕೊಡುವ ಒಪ್ಪಂದ ಮಾಡಿಕೊಂಡಿದ್ದು, ಸದ್ಯಕ್ಕೆ ಅದರ ಅವಧಿ ಮುಗಿದಿರುತ್ತದೆ.
ಜಿಲ್ಲಾಡಳಿತದ ಕೋರಿಕೆಯಂತೆ ಇದೀಗ ಆಕ್ಸಿಜನ್ ಉತ್ಪಾದಿಸಲು ಎಂಎಸ್‍ಪಿಎಲ್ ಮುಂದೆ ಬಂದಿದೆ. ಪ್ರತಿದಿನ 320 ಕೆಎಲ್‍ಡಿ ಆಕ್ಸಿಜನ್ ಉತ್ಪಾದಿಸುವ ಸಾಮರ್ಥ್ಯ ಈ ಘಟಕಕ್ಕೆ ಇದೆ. ಉತ್ಪಾದಿಸಿದ ಆಕ್ಸಿಜನ್ ವಿಎಸ್‍ಐಎಲ್ ತಮ್ಮಲ್ಲಿರುವ ಜಂಬೋ ಸಿಲಿಂಡರ್‌ಗಳ ಮೂಲಕ ಬಾಟ್ಲಿಂಗ್ ಮಾಡಲಿದ್ದಾರೆ.
ಆದರೆ, ಪ್ರತಿದಿನ ಕೇವಲ 8 ಕೆಎಲ್‍ಡಿ ಆಕ್ಸಿಜನ್ ಮಾತ್ರ ಬಾಟ್ಲಿಂಗ್ ಮಾಡುವ ಸಾಮರ್ಥ್ಯ ಇಲ್ಲಿದೆ. ಲಿಕ್ವಿಡ್ ಆಕ್ಸಿಜನ್ ಆಗಿ ಪರಿವರ್ತಿಸುವ ತಾಂತ್ರಿಕ ವ್ಯವಸ್ಥೆ ಇಲ್ಲ ಎಂದರು.
ಈ ಹಿನ್ನೆಲೆಯಲ್ಲಿ ಆಕ್ಸಿಜನ್ ಪೂರೈಕೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿರುವ ಸಚಿವ ಜಗದೀಶ ಶೆಟ್ಟರ್ ಅವರು ಗುರುವಾರ ಘಟಕಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಘಟಕದ ಉನ್ನತೀಕರಣದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕೋವಿಡ್ ನಿರ್ವಹಣೆಗೆ ಸಕಲ ಪ್ರಯತ್ನ : ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆಗೆ ಗರಿಷ್ಠ ಪ್ರಯತ್ನ ನಡೆಸಲಾಗುತ್ತಿದೆ. ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚುವರಿ ಮಾನವ ಸಂಪನ್ಮೂಲಗಳನ್ನು ಸರ್ಕಾರ ಒದಗಿಸಿದೆ.
10 ಜನ ತಜ್ಞರು, 20 ಎಂಬಿಬಿಎಸ್, 20 ಸ್ಟಾಫ್ ನರ್ಸ್, ಡಿ ಗ್ರೂಪ್ ಮತ್ತು ಲ್ಯಾಬ್ ಟೆಕ್ನಿಷಿಯನ್ ಸೇವೆಯನ್ನು 6 ತಿಂಗಳ ಕಾಲ ಮುಂದುವರೆಸಲು ಅನುಮತಿ ನೀಡಿದೆ.
ಇದೇ ರೀತಿ 8 ಲ್ಯಾಬ್ ಟೆಕ್ನಿಷಿಯನ್, 3 ಡಿಟಿಪಿ, 56 ನರ್ಸ್ ಮತ್ತು 25 ಡಿ ಗ್ರೂಪ್ ಸಿಬ್ಬಂದಿಯನ್ನು 3 ತಿಂಗಳ ಮಟ್ಟಿಗೆ ಹೊರಗುತ್ತಿಗೆ ಆಧಾರದಲ್ಲಿ ಪಡೆಯಲು ಅನುಮತಿ ನೀಡಿದೆ ಎಂದರು.
ಜಿಲ್ಲೆಯ ಕೋವಿಡ್ ಬೆಡ್ ಮಾಹಿತಿ : ಸದ್ಯಕ್ಕೆ ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆಗೆ ಬೆಡ್‍ಗಳ ಕೊರತೆ ಇರುವುದಿಲ್ಲ. ಜಿಲ್ಲೆಯಲ್ಲಿ 2,443 ಸರ್ಕಾರಿ ಆಸ್ಪತ್ರೆ ಬೆಡ್ ಸೇರಿದಂತೆ 3,570 ಬೆಡ್‍ಗಳಿವೆ. ಕೋವಿಡ್ ಚಿಕಿತ್ಸೆಗಾಗಿ 765 ಸರ್ಕಾರಿ ಹಾಗೂ 876 ಖಾಸಗಿ ಆಸ್ಪತ್ರೆ ಬೆಡ್‍ಗಳಿವೆ.
ಪ್ರಸ್ತುತ 560 ಸರ್ಕಾರಿ ಹಾಗೂ 380 ಖಾಸಗಿ ಬೆಡ್‍ಗಳಲ್ಲಿ ಕೋವಿಡ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೊರಬದಲ್ಲಿ 30 ಹಾಗೂ ಆನವಟ್ಟಿಯಲ್ಲಿ 20 ಕೋವಿಡ್ ಬೆಡ್‍ಗಳನ್ನು ಸೋಮವಾರದ ಒಳಗಾಗಿ ಸಜ್ಜುಗೊಳಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈ.ಎಲ್. ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಮತ್ತಿತರರು ಉಪಸ್ಥಿತರಿದ್ದರು.