ಕೊಪ್ಪಳ: 'ವೈದ್ಯೋ ನಾರಾಯಣ ಹರಿ' ಎಂಬ ಮಾತಿದೆ. ಅಂದರೆ ರೋಗಿಗಳು ವೈದ್ಯರನ್ನು ದೇವರೆಂದು ತಿಳಿಯುತ್ತಾರೆ. ಅದರಂತೆ ಅನೇಕ ವೈದ್ಯರು ಸಹ ರೋಗಿಗಳ ಸೇವೆಯಲ್ಲಿಯೇ ದೇವರನ್ನು ಕಾಣುವ ಮೂಲಕ ವಿಶೇಷವಾಗಿ ಗುರುತಿಸಿಕೊಳ್ಳುತ್ತಾರೆ. ಅಂತಹ ಸಾಲಿಗೆ ಕೊಪ್ಪಳದ ಈ ವೈದ್ಯ ಸೇರುತ್ತಾರೆ.
ಬರೋಬ್ಬರಿ ಒಂದು ತಿಂಗಳಿನಿಂದ ಮನೆಗೂ ಹೋಗದೆ ಕೋವಿಡ್ ಆಸ್ಪತ್ರೆಯಲ್ಲಿ 24 ಗಂಟೆಗಳ ಕಾಲ ಸೇವೆ ಸಲ್ಲಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಕೊರೊನಾ ಸೋಂಕಿತರಿಗೆ ಸೇವೆ ನೀಡುವ ವೈದ್ಯರು, ವೈದ್ಯಕೀಯ ಸಿಬ್ಬಂದಿ ಕಾರ್ಯ, ಧೈರ್ಯ ಮೆಚ್ಚುವಂತಹದ್ದು.
ಸತತವಾಗಿ ಒಂದು ತಿಂಗಳಿಗೂ ಹೆಚ್ಚು ದಿನಗಳ ಕಾಲ ಇಲ್ಲೊಬ್ಬ ವೈದ್ಯರು ದಿನದ 24 ಗಂಟೆಯೂ ಸೇವೆ ಮಾಡುವ ಮೂಲಕ ವೈದ್ಯರ ಘನತೆಯನ್ನು ಹೆಚ್ಚುವಂತೆ ಮಾಡಿದ್ದಾರೆ. ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಯಾಗಿರುವ ಡಾ. ಮಹೇಶ ಎಂ.ಜಿ., ಎಂಬ ವೈದ್ಯರು ಒಂದು ತಿಂಗಳಿಗೂ ಅಧಿಕ ಕಾಲ ಕೊರೊನಾ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿಕೊಂಡು ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವಿಕೆ ಮೇ ತಿಂಗಳ ಆರಂಭದಲ್ಲಿ ಹೆಚ್ಚಿತ್ತು. ಆಗ ಜಿಲ್ಲಾಡಳಿತದ ಸಹಯೋಗದಲ್ಲಿ ಕೊಪ್ಪಳದ ಶ್ರೀ ಗವಿಮಠದ ಶ್ರೀಗಳು ಗವಿಮಠದ ವೃದ್ದಾಶ್ರಮದಲ್ಲಿ 100 ಹಾಸಿಗೆಯ ಕೋವಿಡ್ ಆಸ್ಪತ್ರೆ ಆರಂಭಿಸಿದರು. ಇಡೀ ಆಸ್ಪತ್ರೆಯನ್ನು ನೋಡಿಕೊಳ್ಳಲು ಡಾ. ಮಹೇಶ ಎಂ.ಜಿ. ಅವರನ್ನು ಜಿಲ್ಲಾಡಳಿತ ನೇಮಕ ಮಾಡಿತು.
ಮೇ 11 ರಿಂದ ಜೂನ್ 14 ರವರೆಗೂ ಕಾರ್ಯನಿರ್ವಹಿಸಿದ ಡಾ. ಮಹೇಶ ಎಂ.ಜಿ. ಅವರು ಒಂದು ದಿನವೂ ಮನೆಗೆ ಹೋಗಿಲ್ಲ. ಪತ್ನಿ, ಮಕ್ಕಳನ್ನು ನೋಡಲೂ ಹೋಗದೆ ಅವರು ಕೋವಿಡ್ ಆಸ್ಪತ್ರೆ ಬಳಿಯ ಯಾತ್ರಿ ನಿವಾಸದಲ್ಲಿ ವಾಸ್ತವ್ಯ ಮಾಡಿ ದಿನದ 24 ಗಂಟೆಯೂ ಸೇವೆ ಮಾಡಿದ್ದಾರೆ.
ಗವಿಮಠದ ಕೋವಿಡ್ ಆಸ್ಪತ್ರೆಯಲ್ಲಿ 315 ಸೋಂಕಿತರು ದಾಖಲಾಗಿದ್ದಾರೆ. ಇಲ್ಲಿ ಕರ್ತ್ಯವಕ್ಕೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಶಿಫ್ಟ್ನಲ್ಲಿ ಸೇವೆ ಮಾಡಿದ್ದಾರೆ. ಆದರೆ ಡಾ. ಮಹೇಶ ಎಂ.ಜಿ. ಅವರು ಮಾತ್ರ ಮನೆಗೆ ಹೋಗದೆ ಅಲ್ಲಿಯೇ ಉಳಿದುಕೊಂಡು ತಿಂಗಳಿಗೂ ಹೆಚ್ಚು ಕಾಲ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡಿ ಜನರಿಗೆ ಬೆಡ್ ಸಿಗುತ್ತಿರಲಿಲ್ಲ. ಆಗ ಗವಿಮಠದ ವೃದ್ದಾಶ್ರಮದಲ್ಲಿ ನೂರು ಹಾಸಿಗೆಯ ಕೋವಿಡ್ ಆಸ್ಪತ್ರೆ ಆರಂಭವಾಯಿತು. ಸೋಂಕಿತರಿಗೆ ಒಳ್ಳೆಯ ಸೇವೆ ನೀಡುವ ಭಾವದಿಂದ ಇಲ್ಲಿನ ಎಲ್ಲ ಸಿಬ್ಬಂದಿಗಳ, ವೈದ್ಯರೊಂದಿಗೆ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಲಾಗಿದೆ.
ಒಂದು ತಿಂಗಳಿಂದ ಮನೆಗೆ ಹೋಗಿಲ್ಲ. ಬೆಳಗ್ಗೆ 5 ಗಂಟೆಯಿಂದ ಕೆಲಸ ಆರಂಭವಾಗಿ ರಾತ್ರಿ 12 ಗಂಟೆಯಾಗುತ್ತಿತ್ತು. ಯಾತ್ರಿ ನಿವಾಸದಲ್ಲಿಯೇ ವಾಸ, ಶ್ರೀಮಠದಿಂದ ಊಟ ಉಪಹಾರ ಬರುತ್ತಿತ್ತು. ರೋಗಿಗಳಿಗೆ ಉತ್ತಮ ಸೇವೆ ನೀಡಿದ ಸಂತೃಪ್ತಿ ಇದೆ ಎಂದು ಡಾ. ಮಹೇಶ ಎಂ.ಜಿ. ಹೇಳುತ್ತಾರೆ.
ಇನ್ನು ಡಾ.ಮಹೇಶ ಅವರ ಈ ಸೇವಾಭಾವನೆಗೆ ಅಲ್ಲಿನ ಸಿಬ್ಬಂದಿ ಹಾಗೂ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.