ಕಾರವಾರ: ಲಾಕ್‌ಡೌನ್‌ನಿಂದಾಗಿ ಮನೆಯ ಎದುರಿನ ರಸ್ತೆ ಬದಿ ನಿಲ್ಲಿಸಿದ್ದ ಸ್ಕೂಟರ್ ಬಾಕ್ಸ್ ನಲ್ಲಿ ಹಕ್ಕಿಯೊಂದು ಗೂಡು ಕಟ್ಟಿ ಮೊಟ್ಟೆ ಇಟ್ಟಿರುವ ಘಟನೆ ತಾಲೂಕಿನ ಸಿದ್ದರದಲ್ಲಿ ನಡೆದಿದೆ.
ಕೊವಿಡ್ ಸೋಂಕು ತೀವ್ರವಾಗಿರುವ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಅನಗತ್ಯವಾಗಿ ವಾಹನ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಹೀಗಾಗಿ ಗ್ರಾಮೀಣ ಭಾಗವಾದ ಸಿದ್ದರ ಮುದಗಾ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ತಮ್ಮ ಮನೆಯ ಎದುರಿನ ರಸ್ತೆ ಬದಿಯಲ್ಲೇ ತಮ್ಮ ಸ್ಕೂಟರ್ ನಿಲ್ಲಿಸಿಟ್ಟಿದ್ದರು.
ಲಾಕ್‌ಡೌನ್ ಅವಧಿಯಲ್ಲಿ ಎಲ್ಲೂ ಸಂಚರಿಸಲು ಅವಕಾಶವಿಲ್ಲದ ಕಾರಣ ಕಳೆದ ಸುಮಾರು 15 ದಿನಗಳಿಂದ ತಮ್ಮ ವಾಹನದತ್ತ ಅವರು ಸುಳಿದಿರಲಿಲ್ಲ. ಬಹಳ ದಿನಗಳು ಬಂದ್ ಇರುವ ತಮ್ಮ ಸ್ಕೂಟರ್‌ನ್ನು ಒಮ್ಮೆ ಸ್ಟಾರ್ಟ್ ಮಾಡುವ ಉದ್ದೇಶದಿಂದ ಇಂದು ಹತ್ತಿರ ಹೋದಾಗ ಅವರಿಗೆ ಆಶ್ಚರ್ಯ ಕಾದಿತ್ತು.
ಸ್ಕೂಟರ್ ಬಾಕ್ಸ್ನಲ್ಲಿ ಹಕ್ಕಿಯೊಂದು ಗೂಡು ಕಟ್ಟಿ ಅದರಲ್ಲಿ ಎರಡು ಮೊಟ್ಟೆಗಳನ್ನು ಇಟ್ಟಿದೆ. ಮೈನಾ ಹಕ್ಕಿಗಳ ಮೊಟ್ಟೆಯಂತೆ ಕಂಡು ಬರುತ್ತಿದ್ದು, ಇದೀಗ ಹಕ್ಕಿಗೂಡು ಹಾಗೂ ಮೊಟ್ಟೆಗಳನ್ನು ಗಮನಿಸಿದ ಸ್ಕೂಟರ್ ಮಾಲಿಕ ಅವು ಮರಿಯಾಗುವರೆಗೂ ಸ್ಕೂಟರ್ ಅನ್ನು ಬಳಸದಿರಲು ಮುಂದಾಗಿದ್ದಾರೆ.