ರಾಣೆಬೆನ್ನೂರು(ಹಾವೇರಿ): ವೃತ್ತಿಯಲ್ಲಿ ಆಟೋ ಚಾಲಕನಾಗಿ ಜೀವನ ನಡೆಸುತ್ತಿರುವ ವ್ಯಕ್ತಿಯೋರ್ವ ಲಾಕ್ಡೌನ್ ಸಮಯದಲ್ಲಿ ನಿರ್ಗತಿಕರಿಗೆ ಅನ್ನ ಹಾಕುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ರಾಣೆಬೆನ್ನೂರು ನಗರದ ರೈಲ್ವೆ ನಿಲ್ದಾಣದಲ್ಲಿ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿರುವ ಶಿವಕುಮಾರ ಡಾವಣಗೇರಿ ಎಂಬ ಚಾಲಕ ತಾನು ದುಡಿದ ಸಂಪಾದನೆಯಲ್ಲಿ ಅಲ್ಪ ಮಟ್ಟಿಗೆ ಬಡವರಿಗೆ ಸಹಾಯ ಮಾಡುತ್ತಿದ್ದಾರೆ. ಕೊರೊನಾ ಹಿನ್ನೆಲೆ ರಾಜ್ಯಾದ್ಯಂತ ಲಾಕ್ಡೌನ್ ಹೇರಲಾಗಿದೆ. ಈ ಸಮಯದಲ್ಲಿ ರಾಣೆಬೆನ್ನೂರು ನಗರದಲ್ಲಿ ಹೋಟೆಲ್ ಹಾಗೂ ತಿಂಡಿ ಅಂಗಡಿಗಳು ಮಧ್ಯಾಹ್ನದ ಸಮಯದಲ್ಲಿ ಬಾಗಿಲು ಹಾಕಿರುತ್ತವೆ. ಇಂತಹ ಸಮಯದಲ್ಲಿ ನಗರದಲ್ಲಿ ನಿರ್ಗತಿಕರು, ಬಡವರಿಗೆ ಊಟದ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಯಾರೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಹಾಗೂ ನಗರದ ಇತರೆ ಬೀದಿಯಲ್ಲಿ ಇರುವ ನಿರ್ಗತಿಕರಿಗೆ ಪಲಾವ್, ಅನ್ನ-ಸಾಂಬಾರು ಮತ್ತು ನೀರಿನ ವ್ಯವಸ್ಥೆ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಆಟೋ ಚಾಲಕ ಶಿವಕುಮಾರ, ದಿನನಿತ್ಯವೂ ಇಂತಹ ಘಟನೆಗಳು ಕಣ್ಣೆದುರು ಕಾಣುತ್ತವೆ. ಆದ್ದರಿಂದ ಬಡವರ ಹಸಿವು ಏನೆಂಬುದರ ಅರಿವು ನನಗೆ ಗೊತ್ತಿದೆ. ಆ ನೋವು ಯಾರಿಗೂ ಬರಬಾರದು ಎಂಬ ಉದ್ದೇಶದಿಂದ ನಮ್ಮ ಕುಟುಂಬ ಸೇರಿ ಅನ್ನದ ಋಣವನ್ನು ತೀರಿಸುತ್ತಿದ್ದೇವೆ ಎಂದರು.