ಮುಂಬೈ: ತೌಕ್ತೆ ಚಂಡಮಾರುತದ ಪ್ರಭಾವಕ್ಕೆ ಸಿಲುಕಿ ಅರಬ್ಬಿ ಸಮುದ್ರದಲ್ಲಿ ಮುಳುಗಡೆಯಾದ ಪಿ – 305 ಬಾರ್ಜ್‌ನಲ್ಲಿದ್ದವರ ಪತ್ತೆಗೆ ಕಾರ್ಯಾಚರಣೆ ಮುಂದುವರೆದಿದೆ. ಈಗಾಗಲೇ ನೌಕಾಪಡೆಯು 188 ಸಿಬ್ಬಂದಿಯನ್ನು ರಕ್ಷಿಸಿದ್ದು, 51 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.
ಪ್ರತಿಕೂಲ ಹವಾಮಾನವನ್ನು ಎದುರಿಸಿ, ಭಾರತೀಯ ನೌಕಾಪಡೆಯ ಯುದ್ಧನೌಕೆಗಳಾದ ಐಎನ್‌ಎಸ್ ಬಿಯಾಸ್, ಐಎನ್‌ಎಸ್ ಬೆಟ್ವಾ ಮತ್ತು ಐಎನ್‌ಎಸ್ ತೆಗ್ ಐಎನ್‌ಎಸ್ ಕೊಚ್ಚಿ ಮತ್ತು ಐಎನ್‌ಎಸ್ ಕೋಲ್ಕತ್ತಾ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದೆ. ನೌಕಾಪಡೆಯು ಹೆಲಿಕಾಪ್ಟರ ಅನ್ನು ಸಹ ಬಳಸಿ ಶೋಧ ಕಾರ್ಯ ನಡೆಸುತ್ತಿದೆ.
ಇನ್ನು ಬಾರ್ಜ್‌ನ ಮುಖ್ಯ ಇಂಜಿನಿಯರ್ ರೆಹಮಾನ್ ಹುಸೇನ್ ಅವರು ಯೆಲ್ಲೋ ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಆಧಾರದ ಮೇಲೆ ಕ್ಯಾಪ್ಟ್‌ನ್ ರಾಕೇಶ್ ಬಳ್ಳ ಸೇರಿದಂತೆ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ತೌಕ್ತೆ ಚಂಡಮಾರುತದ ಬಗ್ಗೆ ಎಚ್ಚರಿಕೆ ನೀಡಿದ್ದರೂ, ಬಾರ್ಜ್ ಅನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸದೇ, ಅಪಾಯಕ್ಕೆ ದೂಡಲಾಯಿತು. ಇದರ ಪರಿಣಾಮವಾಗಿ, ಬಾರ್ಜ್ನಲ್ಲಿದ್ದ ಅನೇಕ ಸಿಬ್ಬಂದಿ ತಮ್ಮ ಪ್ರಾಣವನ್ನು ಕಳೆದುಕೊಳ್ಳಬೇಕಾಯಿತು ಎಂದು ಆರೋಪಿಸಲಾಗಿದೆ.