ಥಾಣೆ: ಹಿಲ್ ಲೈನ್ ಪೊಲೀಸ್ ಠಾಣೆಯಲ್ಲಿ 4 ಯುವಕರ ವಿರುದ್ಧ ವಿವಿಧ ವಿಭಾಗಗಳ ಅಡಿಯಲ್ಲಿ ಕೇಸ್ ದಾಖಲಾಗಿದೆ. ವೇಗವಾಗಿ ಕಾರು ಚಲಾವಣೆ ಮಾಡಿದ್ದಲ್ಲದೆ, ಅನೇಕ ಸ್ಥಳಗಳಲ್ಲಿ ನಿಯಮ ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿದೆ. ಇನ್ನು ಕಾರು ಚಲಾಯಿಸುತ್ತಿರುವ ವಿಡಿಯೋವನ್ನು ಯುವಕನೋರ್ವ ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾನೆ.
ವೈಭವ್ ದಿನಕರ್ ಭಂಡಾರಿ (28), ಪ್ರವೀಣ್ ಬಂಡು ಭಂಡಾರಿ (27), ದೇವಾನಂದ್ ನಾಮದೇವ್ ಭಂಡಾರಿ (20) ಆಕಾಶ್ ಬಾಲು ಭೋಪಿ (28) ಬಂಧಿತ ಆರೋಪಿಗಳು.
ಸಂಜೆ 5.45 ರ ಸುಮಾರಿಗೆ ಅಂಬರ್ನಾಥ್ ತಾಲೂಕಿನ ಹಾಜಿ ಮಲಾಂಗ್ ಬೆಲ್ಟ್ನ ಮಂಗ್ರುಲ್ ಗ್ರಾಮದ ಬಳಿ ಮಾರುತಿ ಸುಜುಕಿ ಎಸ್ ಕ್ರಾಸ್ ವೇಗವಾಗಿ ಚಲಿಸುತ್ತಿದ್ದು, 4 ಜನರು ಪಿಕ್ನಿಕ್ಗೆ ಹೋಗುತ್ತಿದ್ದರು ಎಂದು ತಿಳಿದುಬಂದಿದೆ. ಆ ಸಮಯದಲ್ಲಿ ನಾಗರಿಕನೋರ್ವ ತನ್ನ ಮೊಬೈಲ್‌ನಲ್ಲಿ ವೀಡಿಯೊ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾನೆ. ಇನ್ನು ಈ ವಿಚಾರ ಪೊಲೀಸರ ಗಮನಕ್ಕೂ ಬಂದಿದ್ದು, ಕೇಸು ದಾಖಲಿಸಿ ತನಿಖೆ ನಡೆಸಿದ್ದಾರೆ. ಈ ವೇಳೆ 4 ಮಂದಿ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಈಗಾಗಲೇ ಮಹಾರಾಷ್ಟ್ರದ ಕೆಲ ಪ್ರದೇಶಗಳಲ್ಲಿ ಭಾರೀ ಮಳೆ ಮತ್ತು ಕೊರೊನಾ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದೆ. ಆದರೆ ನಾಲ್ವರು ಆರೋಪಿಗಳು ನಿಯಮ ಉಲ್ಲಂಘಿಸಿದ್ದರು ಎನ್ನಲಾಗಿದೆ.