ಭಾರತ: ಭಾರತ ತಂಡಕ್ಕೆ ಬ್ಯಾಟಿಂಗ್ ವಿಭಾಗದಲ್ಲಿ ಆಧಾರಸ್ತಂಭವಾಗಿರುವ ನಾಯಕ ವಿರಾಟ್ ಕೊಹ್ಲಿ ನೆಟ್ಸ್‌ನಲ್ಲಿ ಗಾಯಗೊಂಡಿದ್ದು, ಕೋಟ್ಯಾಂತರ ಅಭಿಮಾನಿಗಳಿಗೆ ಅಘಾತವಾಗಿದೆ.
ಕಳೆದ ಕೆಲ ವರ್ಷಗಳಿಂದ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ರನ್ ಶಿಖರವನ್ನು ಕಟ್ಟುತ್ತಿರುವ ಕೊಹ್ಲಿ ಈ ಬಾರಿಯ ವಿಶ್ವಕಪ್ನಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದರು. ಆದರೆ,ನಿನ್ನೆ ಸೌತಂಪ್ಟನ್ನಲ್ಲಿ ನೆಟ್ನಲ್ಲಿ ಅಭ್ಯಾಸ ಮಾಡುವ ವೇಳೆ ಕೊಹ್ಲಿ ಕೈಬೆರಳಿಗೆ ಗಾಯ ಮಾಡಿಕೊಂಡಿರುವುದು ತಂಡಕ್ಕೆ ತಲೆನೋವು ತಂದಿದೆ.
ಭಾರತದ ಫಿಸಿಯೋಥೆರಪಿಸ್ಟ್ ಪ್ಯಾಟ್ರಿಕ್ ಫರ್ಹಾರ್ಟ್, ಕೊಹ್ಲಿ ಗಾಯಗೊಂಡಿದ್ದ ವೇಳೆ ತುಂಬಾ ಸಮಯ ಅವರ ಬಳಿಯೇ ಇದ್ದು, ಮೊದಲು ಮ್ಯಾಜಿಕ್ ಸ್ಪ್ರೇ ಮಾಡಿ, ನಂತರ ಗಾಯಕ್ಕೆ ಬ್ಯಾಂಡೈಡ್ ಟೇಪ್ ಮಾಡಿದ್ದಾರೆ. ನಂತರ ಕೊಹ್ಲಿ ಅಭ್ಯಾಸ ಮಾಡದೆ ಐಸ್ಪ್ಯಾಕ್ನಿಂದ ಬೆರಳನ್ನು ಒತ್ತಿಹಿಡಿದು ಮೈದಾನದಿಂದ ಹೊರನಡೆದಿದ್ದಾರೆ.
ಜೂನ್ 5 ರಂದು ದ.ಆಫ್ರಿಕಾ ವಿರುದ್ಧ ಭಾರತ ವಿಶ್ವಕಪ್ ಅಭಿಯಾನ ಆರಂಭಿಸಲಿದ್ದು, ಕೊಹ್ಲಿ ಗಾಯದ ಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಟೂರ್ನಿಯಲ್ಲಿ ಟೀಂ ಇಂಡಿಯಾ ಒಟ್ಟು 9 ಪಂದ್ಯಗಳನ್ನು ಆಡಲಿದ್ದು, ಈ ಪಂದ್ಯದಿಂದ ಕೊಹ್ಲಿ ವಿಶ್ರಾಂತಿ ಪಡೆಯಲಿದ್ದಾರೆಯೇ? ಎಂಬುದನ್ನು ಕಾದು ನೋಡಬೇಕಿದೆ.