ನವದೆಹಲಿ: ಔಷಧ ನಿಯಂತ್ರಣ ಸಂಸ್ಥೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ), ಅಹ್ಮದಾಬಾದ್ ಮೂಲದ ಝೈಡಸ್ ಕ್ಯಾಡಿಲಾ ಸಂಸ್ಥೆಗೆ ಕೋವಿಡ್ ಲಸಿಕೆಯ 3 ನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸಲು ಅನುಮೋದನೆ ನೀಡಿದೆ.
ಭಾರತದಲ್ಲಿ ಸ್ಥಳೀಯವಾಗಿ ಕೋವಿಡ್ ವಿರುದ್ಧ ಝೈಡಸ್ ಕ್ಯಾಡಿಲಾ ಕಂಪನಿಯು ಡಿಎನ್ಎ ಆಧಾರಿತ ಝೈಕೋವ್-ಡಿ (ZyCoV-D) ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, 3 ನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಡಿಸಿಜಿಐ ಅನುಮೋದನೆ ನೀಡಿದೆ.
ದತ್ತಾಂಶಗಳನ್ನು ಪರಿಶೀಲಿಸಿದ ತಜ್ಞರ ಸಮಿತಿ, ಕ್ಲಿನಿಕಲ್ ಪ್ರಯೋಗದಲ್ಲಿ 26 ಸಾವಿರ ಜನರು ಭಾಗವಹಿಸಬೇಕು ಎಂಬ ಶಿಫಾರಸ್ಸಿನ ಮೇಲೆ ಅನುಮೋದನೆ ನೀಡಿದೆ.
BIRAC (ಜೈವಿಕ ತಂತ್ರಜ್ಞಾನ ಉದ್ಯಮ ಸಂಶೋಧನಾ ನೆರವು ಮಂಡಳಿ) ಅಧ್ಯಕ್ಷ ಡಾ. ರೇಣು ಸ್ವರೂಪ್ ಮಾತನಾಡಿ, ಮೊದಲ ಹಾಗೂ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸಿದ ವೇಳೆ, ಉತ್ತಮ ಫಲಿತಾಂಶ ಬಂದಿದೆ. ಇದು ಸ್ಥಳೀಯವಾಗಿ ಉತ್ಪಾದನೆಯಾಗುತ್ತಿರುವ ಲಸಿಕೆಯಾಗಿದ್ದು, ಆತ್ಮನಿರ್ಭರ ಭಾರತಕ್ಕೆ ಒಂದು ಹೊಸ ಮೈಲಿಗಲ್ಲು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ನಿನ್ನೆಯಷ್ಟೇ ಡಿಸಿಜಿಐ, ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಅನ್ನು ತುರ್ತು ಪರಿಸ್ಥಿತಿಯಲ್ಲಿ ಬಳಸಲು ಅನುಮತಿ ನೀಡಿತ್ತು.