ವಿಜಯವಾಡ(ಆಂಧ್ರಪ್ರದೇಶ): ತೆಲುಗು ದೇಶಂ ಪಾರ್ಟಿ(TDP) ಕಚೇರಿ ಹಾಗೂ ನಾಯಕರ ಮನೆಗಳ ಮೇಲೆ ವೈಎಸ್‌ಆರ್‌ಸಿಪಿ(YSRCP) ಕಾರ್ಯಕರ್ತರು ದಾಳಿ ಮಾಡಿರುವ ಆರೋಪ ಕೇಳಿಬಂದಿದ್ದು, ಘಟನೆ ಖಂಡಿಸಿ ಟಿಡಿಪಿ ಇಂದು ಆಂಧ್ರಪ್ರದೇಶ ಬಂದ್‌ಗೆ ಕರೆ ನೀಡಿದೆ. ಬೆಳಗ್ಗೆ ರಾಜ್ಯಾದ್ಯಂತ ಪ್ರತಿಭಟನಾ ರ್ಯಾಲಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವೆಡೆ ಟಿಡಿಪಿ ನಾಯಕರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಟಿಡಿಪಿ ರಾಷ್ಟ್ರೀಯ ಕಚೇರಿ ಜೊತೆಗೆ, ಮಂಗಳವಾರ ಸಂಜೆ ಪಕ್ಷದ ನಾಯಕ ಪಟ್ಟಾಭಿರಾಮ್ ಅವರ ಮನೆ ಮೇಲೆ ದಾಳಿಯಾಗಿತ್ತು. ರಾಜ್ಯಾದ್ಯಂತ ಟಿಡಿಪಿ ಕಚೇರಿಗಳು ಮತ್ತು ನಾಯಕರ ಮನೆಗಳ ಮುಂದೆ ಧರಣಿ ಮಾಡಲು ವೈಎಸ್‌ಆರ್‌ಸಿಪಿ ನಾಯಕರು ಮತ್ತು ಕಾರ್ಯಕರ್ತರು ಮುಂದಾಗಿದ್ದು ಮತ್ತಷ್ಟು ತಲ್ಲಣಕ್ಕೆ ಕಾರಣವಾಗಿದೆ. ಈ ಎಲ್ಲಾ ಘಟನೆಗಳು ನಿನ್ನೆ ಸಂಜೆ ಏಕಕಾಲದಲ್ಲಿ ನಡೆದಿವೆ.
ಟಿಡಿಪಿ ಮುಖ್ಯಸ್ಥ ಚಂದ್ರಬಾಬು ಅವರು ರಾಜ್ಯಪಾಲ ಬಿಶ್ವಭೂಷಣ್ ಹರಿಚಂದನ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದು, ರಾಜ್ಯದಲ್ಲಿನ ಘಟನೆಗಳ ಬಗ್ಗೆ ದೂರು ನೀಡಿದ್ದಾರೆ. ರಾಜಕೀಯ ಪಕ್ಷಗಳ ನಡುವಿನ ಟೀಕೆ ಮತ್ತು ಪ್ರತಿಟೀಕೆ ಸಹಜ. ಆದರೆ ಪಕ್ಷದ ಕಚೇರಿಯ ಮೇಲೆ ಇಂತಹ ದಾಳಿಗಳು ದುಷ್ಟ ಸಂಪ್ರದಾಯಕ್ಕೆ ದಾರಿ ಮಾಡಿಕೊಟ್ಟಿವೆ ಎಂದು ವಿವಿಧ ರಾಜಕೀಯ ಪಕ್ಷಗಳ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಟಿಡಿಪಿ ಆರೋಪಗಳನ್ನು ಆಡಳಿತ ಪಕ್ಷ ನಿರಾಕರಿಸಿದೆ. ವೈಸಿಪಿ ಶಾಸಕರು ಮತ್ತು ನಾಯಕರು ಟಿಡಿಪಿ ಕಚೇರಿಗಳ ಮೇಲೆ ದಾಳಿ ಮಾಡಿಲ್ಲ. ಯಾರ ಮೇಲೂ ಕಲ್ಲು ಹೊಡೆಯುವುದು ಅಥವಾ ದೈಹಿಕವಾಗಿ ಕಿರುಕುಳ ನೀಡುವುದು ತಮ್ಮ ನೀತಿಯಲ್ಲ ಎಂದು ಹೇಳಿದ್ದಾರೆ.
ಇಂದು ಬೆಳಗ್ಗೆಯಿಂದಲೇ ರಾಜ್ಯದ ಎಲ್ಲ ಭಾಗಗಳಲ್ಲಿ ಟಿಡಿಪಿ ನಾಯಕರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ, ಪೊಲೀಸರು ಟಿಡಿಪಿ ನಾಯಕರು ಮತ್ತು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ಕೆಲವರನ್ನು ಗೃಹ ಬಂಧನದಲ್ಲಿಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.