ಚೆನ್ನೈ (ತಮಿಳುನಾಡು): ತಮಿಳುನಾಡಿನ ಖ್ಯಾತ ಯೂಟ್ಯೂಬರ್ ಟಿಟಿಎಫ್ ವಾಸನ್ ಅವರಿಗೆ ತಮಿಳುನಾಡು ಸರ್ಕಾರ ಶಾಕ್ ನೀಡಿದೆ. ವಾಸನ್ ಚಾಲನಾ ಪರವಾನಗಿ ಮುಂದಿನ ಹತ್ತು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ. ಇತ್ತೀಚೆಗೆ ಬೈಕ್ ಅಪಘಾತದಲ್ಲಿ ಗಾಯಗೊಂಡಿರುವ ವಾಸನ್, ಸದ್ಯ ಜೈಲಿನಲ್ಲಿದ್ದಾರೆ. ಇದರ ಬೆನ್ನಲ್ಲೇ ಹತ್ತು ವರ್ಷ ಡ್ರೈವಿಂಗ್ ಲೈಸೆನ್ಸ್ ರದ್ದು ಮಾಡುವ ಮಹತ್ವದ ನಿರ್ಧಾರವನ್ನು ರಾಜ್ಯ ಸಾರಿಗೆ ಇಲಾಖೆ ಕೈಗೊಂಡಿದೆ.
ಸೆಪ್ಟೆಂಬರ್ 19ರಂದು ಯೂಟ್ಯೂಬರ್ ಟಿಟಿಎಫ್ ವಾಸನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕಾಂಚಿಪುರಂ ಬಳಿಯ ಚೆನ್ನೈ-ವೆಲ್ಲೂರು ಹೆದ್ದಾರಿಯಲ್ಲಿ ಅತಿವೇಗ, ಅಜಾಗರೂಕತೆ ಹಾಗೂ ಅಪಾಯಕಾರಿ ರೀತಿಯಲ್ಲಿ ಬೈಕ್ ಚಲಾಯಿಸಿದ್ದ ಆರೋಪದ ಮೇಲೆ ಬಾಲುಚೆಟ್ಟಿ ಛತ್ರಂ ಠಾಣೆ ಪೊಲೀಸರು ಕೇಸ್ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ವಾಸನ್ ಸದ್ಯ ಪುಝಲ್ ಜೈಲಿನಲ್ಲಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ: ಮರಕ್ಕೆ ಬೈಕ್ ಡಿಕ್ಕಿಯಾಗಿ ರೀಲ್ಸ್ ಸ್ಟಾರ್ ಸ್ಥಳದಲ್ಲೇ ಸಾವು
ಇತ್ತೀಚೆಗೆ ಟಿಟಿಎಫ್ ವಾಸನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕಾಂಚೀಪುರಂ ನ್ಯಾಯಾಲಯ ತಿರಸ್ಕರಿಸಿತು. ಹೀಗಾಗಿ ವಾಸನ್ ಜಾಮೀನು ಕೋರಿ ಮದ್ರಾಸ್ ಹೈಕೋರ್ಟ್ಗೂ ಮೊರೆ ಹೋಗಿದ್ದರು. ಆದರೆ, ಅಲ್ಲಿ ಕೂಡ ಹಿನ್ನಡೆಯಾಗಿದೆ. ವಾಸನ್ ವೇಗವಾಗಿ ಬೈಕ್ ಓಡಿಸುತ್ತಿದ್ದರು. ಇದೇ ವೇಳೆ, ಜಾನುವಾರುಗಳು ರಸ್ತೆ ದಾಟುತ್ತಿದ್ದಾಗ ಏಕಾಏಕಿ ಬ್ರೇಕ್ ಹಾಕಿದ್ದಾರೆ. ಬ್ರೇಕ್ ಹಾಕದಿದ್ದರೆ ವಾಸನ್ ಪ್ರಾಣ ಹಾಗೂ ಜಾನುವಾರುಗಳಿಗೆ ಅಪಾಯವಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದೆಡೆ, ಅಪಘಾತದಲ್ಲಿ ಗಾಯಗೊಂಡಿದ್ದು, ಜೈಲಿನಲ್ಲಿ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಆದ ಕಾರಣ ಗಾಯಗಳು ತೀವ್ರವಾಗುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಗಿದೆ. ಆದ್ದರಿಂದ ವಾಸನ್ ಅವರಿಗೆ ಜಾಮೀನು ನೀಡುವಂತೆ ನ್ಯಾಯಾಲಯದಲ್ಲಿ ಕೋರಲಾಗಿತ್ತು. ಅಲ್ಲದೇ, ಉದ್ದೇಶಪೂರ್ವವಾಗಿ ಅಪಘಾತ ಮಾಡಿಲ್ಲ. ನಾನು ನಿರಪರಾಧಿ. ಯಾವುದೇ ಅಪರಾಧದಲ್ಲಿ ಭಾಗಿಯಾಗಿಲ್ಲ. ನ್ಯಾಯಾಲಯ ವಿಧಿಸಿರುವ ಷರತ್ತುಗಳಿಗೆ ಬದ್ಧನಾಗಿರುತ್ತೇನೆ ಎಂದು ತನ್ನ ಅರ್ಜಿಯಲ್ಲಿ ವಾಸನ್ ತಿಳಿಸಿದ್ದರು. ಆದರೂ, ಮದ್ರಾಸ್ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ.
ಇದರ ನಡುವೆ ತಮಿಳುನಾಡಿನ ಸಾರಿಗೆ ಇಲಾಖೆಯು ವಾಸನ್ ಚಾಲನಾ ಪರವಾನಗಿಯನ್ನು ಹತ್ತು ವರ್ಷಗಳ ಕಾಲ ಎಂದರೆ 2033ರ ಅಕ್ಟೋಬರ್ 5ರವರೆಗೆ ಅಮಾನತುಗೊಳಿಸಿದೆ. ಸೆಕ್ಷನ್ 19 (1) (ಡಿ) ಮತ್ತು (ಎಫ್) ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ವಾಸನ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಅದರಲ್ಲೂ, ಯೂಟ್ಯೂಬ್ನಲ್ಲಿ ಬೈಕ್ ಸ್ಟಂಟ್, ರೇಸಿಂಗ್, ವ್ಹೀಲಿಂಗ್ ಸೇರಿ ಇತ್ಯಾದಿಗಳ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದರು.
ಇದನ್ನೂ ಓದಿ: 300 ಕಿಮೀ ವೇಗದಲ್ಲಿ ಬೈಕ್ ಚಾಲನೆಯೊಂದಿಗೆ ವಿಡಿಯೋ ಮಾಡಲು ಯತ್ನ: ಯೂಟ್ಯೂಬರ್ - ಬೈಕರ್ ದಾರುಣ ಸಾವು