ವಾಶಿಂಗ್ಟನ್: ಗರ್ಭಪಾತದ ಬಗ್ಗೆ ತಪ್ಪು ಮಾಹಿತಿ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ತನ್ನ ಪ್ಲಾಟ್ಫಾರ್ಮ್ನಲ್ಲಿರುವ ಗರ್ಭಪಾತದ ಕುರಿತಾದ ವೀಡಿಯೋಗಳನ್ನು ತೆಗೆದುಹಾಕಲಾಗುವುದು ಎಂದು ಯೂಟ್ಯೂಬ್ ತಿಳಿಸಿದೆ. ಅಮೆರಿಕದ ಹಲವಾರು ಪ್ರಾಂತ್ಯಗಳಲ್ಲಿ ಗರ್ಭಪಾತದ ಹಕ್ಕನ್ನು ಮೊಟಕುಗೊಳಿಸಿದ ನಂತರ, ಮಹಿಳೆಯರು ಗರ್ಭಧಾರಣೆಯ ಬಗ್ಗೆ ಯೂಟ್ಯೂಬ್ನಲ್ಲಿ ಮಾಹಿತಿ ಹುಡುಕಾಡುವುದು ಹೆಚ್ಚಳವಾದ ಹಿನ್ನೆಲೆಯಲ್ಲಿ ಯೂಟ್ಯೂಬ್ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
"ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಜನರಿಗೆ ಅಧಿಕೃತವಾದ ಮಾಹಿತಿಯನ್ನು ಮಾತ್ರ ತಿಳಿಸುವುದು ಮುಖ್ಯ ಎಂದು ನಾವು ನಂಬುತ್ತೇವೆ ಮತ್ತು ಕಾಲಮಾನಕ್ಕೆ ತಕ್ಕಂತೆ ಬದಲಾದ ಪರಿಸ್ಥಿತಿಗಳಲ್ಲಿ ನಮ್ಮ ನೀತಿ-ನಿಯಮಗಳನ್ನು ಬದಲಾಯಿಸುತ್ತೇವೆ" ಎಂದು ಯೂಟ್ಯೂಬ್ ವಕ್ತಾರೆ ಎಲೆನೆ ಹರ್ನಾಂಡೆಜ್ ತಿಳಿಸಿದ್ದಾರೆ. "ಇಂದಿನಿಂದ ಆರಂಭವಾಗಿ ಮುಂದಿನ ಕೆಲ ವಾರಗಳಲ್ಲಿ ಅಸುರಕ್ಷಿತವಾದ ಗರ್ಭಪಾತದ ಮಾಹಿತಿ ಅಥವಾ ಗರ್ಭಪಾತದ ಬಗ್ಗೆ ತಪ್ಪು ಮಾಹಿತಿ ನೀಡುವ ಎಲ್ಲ ವಿಷಯಗಳನ್ನು ತೆಗೆದುಹಾಕಲು ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ" ಎಂದು ಅವರು ಹೇಳಿದ್ದಾರೆ.
1973ರ ರೋ ವರ್ಸಸ್ ವೇಡ್ ತೀರ್ಪನ್ನು ಅಮೆರಿಕ ಸುಪ್ರೀಂ ಕೋರ್ಟ್ ಅನೂರ್ಜಿತಗೊಳಿಸಿದ ನಂತರ ದೇಶದ ಬಹುತೇಕ ರಾಜ್ಯಗಳಲ್ಲಿ ಗರ್ಭಪಾತ ನಿಷೇಧವಾಗಲಿದೆ. ಈ ಹಿನ್ನೆಲೆಯಲ್ಲಿ ಗರ್ಭಪಾತದ ಬಗ್ಗೆ ಮಾಹಿತಿ ಜಾಲಾಡುವುದು, ಗರ್ಭಪಾತ ಮಾಡಿಕೊಳ್ಳುವ ವಿಧಾನ ಹುಡುಕಾಡುವುದು, ತಾವೇ ಗರ್ಭಪಾತ ಮಾಡಿಕೊಳ್ಳಲು ಮುಂದಾಗುವುದು ಇವೇ ಮುಂತಾದ ಕೃತ್ಯಗಳನ್ನು ತಡೆಗಟ್ಟುವ ಉದ್ದೇಶದಿಂದ ಯೂಟ್ಯೂಬ್ ತನ್ನ ನೀತಿ-ನಿಯಮಗಳನ್ನು ಬದಲಾವಣೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.