ಶ್ರೀನಗರ (ಜಮ್ಮುಕಾಶ್ಮೀರ): ನಗರದಲ್ಲಿ ಮೊಹರಂ ಮೆರವಣಿಗೆ ಮುಕ್ತಾಯದ ವೇಳೆಗೆ ಯುವಕನ ಮೇಲೆ ಕಾರು ಹರಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ.
ಇಂದಿನಿಂದ ಮೊಹರಂ ತಿಂಗಳು ಆರಂಭವಾಗಿದ್ದು, ಮೆರವಣಿಗೆ ನಡೆಸುತ್ತಿದ್ದ ಶಿಯಾ ಮುಸ್ಲಿಮರನ್ನು ಚದುರಿಸಲು ಕಾಶ್ಮೀರ ಪೊಲೀಸರು ಲಾಠಿ ಮತ್ತು ಅಶ್ರುವಾಯು ಪ್ರಯೋಗಿಸಿದ್ದು, 10ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದರು.
ಕೋವಿಡ್ನಿಂದಾಗಿ ಮೆರವಣಿಗೆಗಳನ್ನು ನಿಷೇಧಿಸಲಾಗಿದ್ದರೂ ನೂರಾರು ಮುಸ್ಲಿಮರು ಧಾರ್ಮಿಕ ಮತ್ತು ಸ್ವಾತಂತ್ರ್ಯ ಪರ ಘೋಷಣೆಗಳನ್ನು ಕೂಗುತ್ತಾ ಶ್ರೀನಗರದದಲ್ಲಿ ರಸ್ತೆಗಿಳಿದಿದ್ದರು. ಈ ಬಗ್ಗೆ ವರದಿ ಮಾಡುತ್ತಿದ್ದ ಪತ್ರಕರ್ತರಿಗೂ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ ಎಂದು ಹೇಳಲಾಗಿದೆ.
ನಾವು ಎಲ್ಲರ ಧಾರ್ಮಿಕ ಭಾವನೆಗಳನ್ನು ಮತ್ತು ಆಚರಣೆಗಳನ್ನು ಗೌರವಿಸುತ್ತೇವೆ. ಆದರೆ, ಶಾಂತಿಯುತ ವಾತಾವರಣವನ್ನು ಕೆಡಿಸಲು ಪ್ರಯತ್ನಿಸುವವರನ್ನು ತಡೆಯುವುದು ಕೂಡ ನಮ್ಮ ಜವಾಬ್ದಾರಿಯಾಗಿದೆ ಎಂದು ಕಾಶ್ಮೀರ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ವಿಜಯ್ ಕುಮಾರ್ ತಿಳಿಸಿದ್ದಾರೆ.
ಮೊಹರಂ ವಿಶ್ವದಾದ್ಯಂತ ಶಿಯಾ ಮುಸ್ಲಿಮರ ಪವಿತ್ರ ತಿಂಗಳುಗಳಲ್ಲಿ ಒಂದಾಗಿದೆ. ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಮೊಮ್ಮಗನ ಸಾವಿಗೆ ಸಂತಾಪ ಸೂಚಿಸಲು ಮುಸ್ಲಿಮರು ಈ ತಿಂಗಳಲ್ಲಿ ದೊಡ್ಡ ದೊಡ್ಡ ಮೆರವಣಿಗೆಗಳನ್ನು ನಡೆಸುತ್ತಾರೆ.