ಮಹಬೂಬ್‌ನಗರ(ತೆಲಂಗಾಣ): ಅನೇಕ ಯುವಕ ಮತ್ತು ಯುವತಿಯರು ಪೊಲೀಸ್ ಇಲಾಖೆಯಲ್ಲಿ ಸೇರಲು ಇಚ್ಛಿಸುತ್ತಾರೆ. ಅದಕ್ಕಾಗಿ ಕಷ್ಟಪಟ್ಟು ಓದಿ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪೈಪೋಟಿಗೆ ಸಜ್ಜಾಗುತ್ತಾರೆ. ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ, ದೈಹಿಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ. ಆದ್ರೆ ಕೆಲ ಯುವತಿಯರಿಗೆ ಅವರ ಎತ್ತರ ಶಾಪವಾಗಿ ಪರಿಣಮಿಸುತ್ತಿದೆ. ಹೀಗಾಗಿ ಪೊಲೀಸ್ ಸಮವಸ್ತ್ರ ಧರಿಸುವ ಮತ್ತು ಲಾಠಿ ಹಿಡಿಯುವ ಅವರ ಕನಸು ಕನಸಾಗಿಯೇ ಉಳಿದಿದೆ. ಯುವತಿಯೊಬ್ಬರು ತಮ್ಮ ಎತ್ತರವನ್ನು ಹೆಚ್ಚಿಸಿಕೊಳ್ಳಲು ಅಡ್ಡದಾರಿ ಹಿಡಿದು ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ.
ಏನಿದು ಘಟನೆ: ಮಹಬೂಬ್‌ನಗರದ ಮೈದಾನದಲ್ಲಿ ನಾಲ್ಕು ದಿನಗಳ ಕಾಲ ಮಹಿಳಾ ಅಭ್ಯರ್ಥಿಗಳಿಗೆ ಫಿಟ್‌ನೆಸ್ ಪರೀಕ್ಷೆ ನಡೆಸಲಾಗುತ್ತಿದೆ. ಬುಧವಾರ ನಡೆದ 800 ಮೀಟರ್ ಓಟದಲ್ಲಿ ಮಹಬೂಬ್‌ನಗರ ಜಿಲ್ಲೆಯ ಯುವತಿಯೊಬ್ಬರು ಅರ್ಹತೆ ಪಡೆದು ಎತ್ತರ ಅಳೆಯುವ ಹಂತಕ್ಕೆ ತಲುಪಿದ್ದರು. ಪೊಲೀಸ್ ಉದ್ಯೋಗಕ್ಕೆ ಅರ್ಹತೆ ಪಡೆಯಲು ಮಹಿಳಾ ಅಭ್ಯರ್ಥಿಯೊಬ್ಬರು ತನ್ನ ಎತ್ತರವನ್ನು ಹೆಚ್ಚಿಸಲು ಮಾಡಿದ ಪ್ರಯತ್ನವನ್ನು ಮಹಬೂಬ್‌ನಗರ ಜಿಲ್ಲಾ ಪೊಲೀಸರು ವಿಫಲಗೊಳಿಸಿದ್ದಾರೆ.
ಪೊಲೀಸ್ ಇಲಾಖೆಯವರು ನಡೆಸುತ್ತಿದ್ದ ವೇಳೆ ಯುವತಿಯ ಎತ್ತರ ಅಳೆಯಲಾಗುತ್ತಿತ್ತು. ಈ ವೇಳೆ ಯುವತಿಗೆ ಎಲೆಕ್ಟ್ರಾನಿಕ್ ಯಂತ್ರದ ಮುಂದೆ ನಿಲ್ಲುವಂತೆ ಸೂಚಿಸಿದ್ದರು. ಅದರಂತೆ ಯುವತಿ ಆಧುನಿಕ ಸಾಧನದ ಮುಂದೆ ನಿಂತಾಗ ಸೆನ್ಸಾರ್‌ಗಳು ಯುವತಿಯ ಎತ್ತರವನ್ನು ಅಳೆಯಲು ವಿಫಲವಾದವು. ಹೀಗಾಗಿ ಮಹಿಳಾ ಪೊಲೀಸ್ ಅಧಿಕಾರಿಗೆ ಅನುಮಾನ ಬಂದಿದ್ದು, ಅಭ್ಯರ್ಥಿಯ ತಲೆಯನ್ನು ಪರೀಕ್ಷಿಸಿದಾಗ ಯುವತಿ ಅಡ್ಡದಾರಿ ಹಿಡಿದಿರುವುದು ಬೆಳಕಿಗೆ ಬಂದಿದೆ.
ಪೊಲೀಸ್ ತನಿಖೆ ವೇಳೆ ಅಭ್ಯರ್ಥಿ ತಮ್ಮ ಕೂದಲಿಗೆ ಎಂ-ಸೀಲ್ ವ್ಯಾಕ್ಸ್ ಅಂಟಿಸಿರುವುದು ಪತ್ತೆಯಾಗಿದೆ. ತಲೆಗೆ ಮೇಣ ಹಾಕಿಕೊಂಡು ಹೆಚ್ಚು ಎತ್ತರ ತೋರಿಸಲು ಯತ್ನಿಸಿದ ಮಹಿಳಾ ಅಭ್ಯರ್ಥಿಯನ್ನು ಎಸ್ಪಿ ವೆಂಕಟೇಶ್ವರಲು ಅನರ್ಹರಗೊಳಿಸಿದ್ದಾರೆ. ದೈಹಿಕ ಕ್ಷಮತೆ ಪರೀಕ್ಷೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಲಾಗುತ್ತಿದೆ. ಸಿಸಿ ಕ್ಯಾಮರಾ ಹಾಗೂ ಪೊಲೀಸ್ ಸಿಬ್ಬಂದಿ ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತೇವೆ. ಅಕ್ರಮ ನಡೆಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ವೆಂಕಟೇಶ್ವರಲು ಎಚ್ಚರಿಸಿದರು.
ಓದಿ: ಗಡಿ ವಿವಾದ: ಕರ್ನಾಟಕ ಸೇರುವ ನಿರ್ಣಯ ಹಿಂಪಡೆದ ಮಹಾರಾಷ್ಟ್ರದ 11 ಗ್ರಾಮಗಳು