ಹೈದರಾಬಾದ್ (ತೆಲಂಗಾಣ): ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೂ ಮುನ್ನ ಯುವ ಮತದಾರರ ಮೇಲೆ ರಾಜಕೀಯ ಪಕ್ಷಗಳು ಹೆಚ್ಚಿನ ಗಮನ ಕೇಂದ್ರೀಕರಿಸುತ್ತಿವೆ. ಈ ರಾಜ್ಯಗಳ ರಾಜಕೀಯ ಭವಿಷ್ಯ ರೂಪಿಸುವಲ್ಲಿ ಯುವ ಮತದಾರರು ಪ್ರಮುಖವಾಗಿದ್ದಾರೆ. 18ರಿಂದ 19 ವರ್ಷ ವಯಸ್ಸಿನ ಸುಮಾರು 60 ಲಕ್ಷ ಮೊದಲ ಬಾರಿಗೆ ಮತದಾರರು ಮತ ಚಲಾಯಿಸಲು ಸಜ್ಜಾಗಿದ್ದಾರೆ. ಮತದಾನಕ್ಕೆ ಅರ್ಹತಾ ದಿನಾಂಕ ಬದಲಾವಣೆಯಿಂದಾಗಿ 15.39 ಲಕ್ಷಕ್ಕೂ ಹೆಚ್ಚು ಯುವ ಮತದಾರರು ತಮ್ಮ ಹಕ್ಕು ಚಲಾವಣೆಯ ಅರ್ಹತೆ ಪಡೆದಿದ್ದಾರೆ.
ಛತ್ತೀಸ್‌ಗಢದಲ್ಲಿ ಯುವ ಮತದಾರರ ಪ್ರಮಾಣ: ಛತ್ತೀಸ್‌ಗಢದಲ್ಲಿ 18ರಿಂದ 22 ವರ್ಷದೊಳಗಿನ ಯುವ ಮತದಾರರ ಸಂಖ್ಯೆ 18.68 ಲಕ್ಷದಷ್ಟಿದೆ. ಈ ಹೊಸ ಮತದಾರರು ರಾಜ್ಯದ ಒಟ್ಟು ಅರ್ಹ ಮತದಾರರ ಪೈಕಿ ಶೇ.0.70ರಷ್ಟಾಗಲಿದ್ದಾರೆ. ಈ ಮೂಲಕ ಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ ಹೊಸದಾಗಿ ಪ್ರವೇಶಿಸುತ್ತಿರುವ ಇವರು ಚುನಾವಣೆಯ ಫಲಿತಾಂಶದ ಮೇಲೆ ಗಮನಾರ್ಹ ಪರಿಣಾಮ ಬೀರಲು ಸಾಧ್ಯವಿದೆ.
ತೆಲಂಗಾಣದಲ್ಲಿ ಯುವ ಮತದಾರರ ಪ್ರಮಾಣ: ತೆಲಂಗಾಣದಲ್ಲಿ ಒಟ್ಟು 3.14 ಕೋಟಿ ಮತದಾರರಲ್ಲಿ 7 ಲಕ್ಷ ಯುವಕರು ಮೊದಲ ಬಾರಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮತದಾರರು 75 ಲಕ್ಷಕ್ಕೂ ಹೆಚ್ಚು ಎಂದರೆ ಶೇ.30ರಷ್ಟಿದ್ದಾರೆ. ಹೀಗಾಗಿ ರಾಜಕೀಯ ಪಕ್ಷಗಳು ಈ ಯುವ ಮತದಾರರನ್ನು ಓಲೈಸುವ ಪ್ರಯತ್ನ ಮಾಡುತ್ತಿವೆ. ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿ ಎರಡು ಲಕ್ಷ ಸರ್ಕಾರಿ ಉದ್ಯೋಗ ನೀಡುವ ಭರವಸೆಯನ್ನು ಯುವಕರಿಗೆ ನೀಡುತ್ತಿದೆ.
ಇದನ್ನೂ ಓದಿ: ರಾಜಸ್ಥಾನ ವಿಧಾನಸಭಾ ಚುನಾವಣೆ: ಸಾವಿರಾರು ಮದುವೆಗಳ ಕಾರಣಕ್ಕಾಗಿ ಮತದಾನದ ದಿನಾಂಕವೇ ಬದಲು!
ಮಧ್ಯಪ್ರದೇಶದಲ್ಲಿ ಯುವ ಮತದಾರರ ಪ್ರಮಾಣ: ಮಧ್ಯಪ್ರದೇಶದಲ್ಲೂ ಯುವ ಮತದಾರರು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಈ ರಾಜ್ಯವು 22.36 ಲಕ್ಷ ಯುವ ಮತದಾರರನ್ನು ಹೊಂದಿದೆ. ಇವರು ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸಲಿದ್ದಾರೆ. 18ರಿಂದ 29 ವರ್ಷದೊಳಗಿನ ಯುವ ಮತದಾರರ ಸಂಖ್ಯೆ 1.63 ಕೋಟಿಗೂ ಅಧಿಕವಿದೆ. ಮಧ್ಯಪ್ರದೇಶದ ಚುನಾವಣಾ ಆಯೋಗವು ಯುವಕರಿಗೆ 18 ವರ್ಷ ತುಂಬುವ ಮೊದಲೇ ಅವರ ಹೆಸರು ಸೇರಿಸಲು ಅವಕಾಶ ನೀಡಿದೆ. ಈ ನೋಂದಣಿ ಕಾರ್ಯವನ್ನು ವರ್ಷವಿಡೀ ಬಹುಹಂತಗಳಲ್ಲಿ ನಡೆಸಲು ನಿರ್ಧರಿಸಿದೆ.
ರಾಜಸ್ಥಾನದಲ್ಲಿ ಯುವ ಜನತೆಯನ್ನು ಸೆಳೆಯುವ ಕಸರತ್ತು: ರಾಜಸ್ಥಾನದಲ್ಲಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವಲ್ಪ ಮತಗಳ ಅಂತರದಿಂದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ ಅಧಿಕಾರಕ್ಕೆ ಬಂದಿತ್ತು. ಒಟ್ಟು ಮತದಾನದಲ್ಲಿ ಶೇ.39.3ರಷ್ಟು ಮತಗಳನ್ನು ಕಾಂಗ್ರೆಸ್ ಪಡೆದುಕೊಂಡಿದ್ದರೆ, ಎರಡನೇ ಅತಿದೊಡ್ಡ ಪಕ್ಷವಾದ ಬಿಜೆಪಿ ಶೇ.38.8ರಷ್ಟು ಮತಗಳನ್ನು ಪಡೆದಿತ್ತು. ಇಲ್ಲಿ ಎರಡು ಪಕ್ಷಗಳಿಗೆ ಕೇವಲ ಶೇ.0.5ರಷ್ಟು ಎಂದರೆ 1,89,899 ಮತಗಳ ವ್ಯತ್ಯಾಸ ಅಷ್ಟೇ ಇತ್ತು. ಹೀಗಾಗಿ ಈ ಬಾರಿ ಎರಡೂ ಪಕ್ಷಗಳು ಯುವ ಮತದಾರರ ಮೇಲೆ ಕಣ್ಣಿಟ್ಟಿವೆ. ಕಾಂಗ್ರೆಸ್ ತನ್ನ ಕೊನೆಯ ಬಜೆಟ್ ಅನ್ನು ಯುವಕರ ಕಾರ್ಯಕ್ರಮಗಳಿಗೆ ಹೆಚ್ಚಾಗಿ ಮೀಸಲಿಟ್ಟಿದೆ. ಮತ್ತೊಂದೆಡೆ, ಬಿಜೆಪಿ ಪ್ರಶ್ನೆಪತ್ರಿಕೆಗಳ ಸೋರಿಕೆ ಮತ್ತು ನಿರುದ್ಯೋಗಕ್ಕೆ ಸಂಬಂಧಿಸಿದ ವಿಷಯಗಳನ್ನು ಮುಂದಿಟ್ಟುಕೊಂಡು ಯುವಮತದಾರರನ್ನು ಸೆಳೆಯುವ ಕಸರತ್ತು ಅನುಸರಿಸುತ್ತಿದೆ.
ಇದನ್ನೂ ಓದಿ: MP Election: ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಪ್ರತಿ ಮನೆಗೆ ತಲಾ ಒಂದು ಉದ್ಯೋಗ.. ಮಧ್ಯಪ್ರದೇಶ ಸಿಎಂ ಶಿವರಾಜ್ ಘೋಷಣೆ