ಹೈದರಾಬಾದ್ (ತೆಲಂಗಾಣ): ಹೈದರಾಬಾದ್ನಲ್ಲಿ ದಾರುಣ ಘಟನೆಯೊಂದು ನಡೆದಿದೆ. ತಾನು ಪ್ರೀತಿಸುತ್ತಿದ್ದ ಅಪ್ರಾಪ್ತ ಬಾಲಕಿಯ ಮನೆ ಮುಂದೆ ಯುವಕನೋರ್ವ ಡೀಸೆಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸಜೀವ ದಹನವಾಗಿದ್ದಾನೆ. ಇಲ್ಲಿನ ಚಷ್ಮಾ ನಗರದ ಜಮಾಲ್ ಎಂಬ ಯುವಕನೇ ಬೆಂಕಿ ಆತ್ಮಹತ್ಯೆ ಮಾಡಿಕೊಂಡವ.
ಟೈಲರ್ವೊಬ್ಬರ ಬಳಿ ಕೆಲಸ ಮಾಡುತ್ತಿದ್ದ ಜಮಾಲ್ ಆತನ ಅಪ್ರಾಪ್ತ ಮಗಳನ್ನು ಪ್ರೀತಿಸಿದ್ದ. ಅಲ್ಲದೇ, ಆಕೆಯನ್ನು ಮದುವೆ ಮಾಡಿಕೊಡುವಂತೆ ಕೇಳಿದ್ದ. ಅದಕ್ಕೆ ಒಪ್ಪದ ಬಾಲಕಿಯ ತಂದೆ ಛೀಮಾರಿ ಹಾಕಿ ಕಳುಹಿಸಿದ್ದ ಎನ್ನಲಾಗ್ತಿದೆ. ಆದ್ದರಿಂದ ಜಮಾಲ್ ಶನಿವಾರ ಡೀಸೆಲ್ ಡಬ್ಬಿಯೊಂದಿಗೆ ಬಾಲಕಿಯ ಮನೆಗೆ ಬಂದಿದ್ದ. ಈ ವೇಳೆ ಕುಟುಂಬದವರು ಭಯಭೀತರಾಗಿ ಬಾಗಿಲು ಮುಚ್ಚಿಕೊಂಡಿದ್ದರು. ಇತ್ತ, ಬಾಗಿಲು ಮುಚ್ಚುತ್ತಿದ್ದಂತೆಯೇ ಜಮಾಲ್ ಡೀಸೆಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.
ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದರು. ಆದರೆ, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಆತ ಮೃತಪಟ್ಟಿದ್ದಾನೆ. ಜಮಾಲ್ನನ್ನು ಕೊಲೆ ಮಾಡಲಾಗಿದೆ ಎಂದು ಆತನ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಹೊಸ ವಿಷಯಗಳು ಬಯಲಿಗೆ: ಜಮಾಲ್ ಸಾವಿನ ಬಗ್ಗೆ ಫಲಕ್‌ನಾಮ ಪೊಲೀಸರು ಕೈಗೊಂಡ ತನಿಖೆಯಲ್ಲಿ ಹೊಸ ಸಂಗತಿಗಳು ಬೆಳಕಿಗೆ ಬಂದಿವೆ. ಬಾಲಕಿಯ ಮನೆ ಹೋದಾಗ ಜಮಾಲ್ ಡೀಸೆಲ್ ಕ್ಯಾನ್ ಜೊತೆಗೆ 14 ಕೆಜಿ ಸಿಲಿಂಡರ್ ಕೂಡ ತೆಗೆದುಕೊಂಡು ಹೋಗಿದ್ದ. ಡೀಸೆಲ್ ಸುರಿದುಕೊಂಡು ಜಮಾಲ್ ಸಿಲಿಂಡರ್ ಲೀಕ್ ಮಾಡಿ ಬೆಂಕಿ ಹಚ್ಚಿಕೊಂಡಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.
ಅಲ್ಲದೇ, ಟೈಲರ್ ಮೋಸಿನ್ ಎಂಬುವವರ ಬಳಿ ಜಮಾಲ್ ಕಳೆದ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಒಂದು ವರ್ಷದಿಂದ ಬಾಲಕಿಯನ್ನು ಪ್ರೀತಿಸುತ್ತಿದ್ದ. ಜೊತೆಗೆ ಮದುವೆ ಮಾಡಿಕೊಡಲು ನಿರಾಕರಿಸಿದ ಕಾರಣಕ್ಕೆ ಬಾಲಕಿಯ ಜೊತೆಗೆ ಇಡೀ ಕುಟುಂಬವನ್ನು ಕೊಲೆ ಮಾಡುವ ಉದ್ದೇಶವನ್ನು ಜಮಾಲ್ ಹೊಂದಿದ್ದ ಎಂಬ ಅಂಶವೂ ಬಯಲಾಗಿದೆ. ಬಾಲಕಿಯ ಹಾಗೂ ಜಮಾಲ್ ನಡುವೆ ನಡೆದ ಆಡಿಯೋ ಕಾಲ್ ರಿಕಾರ್ಡ್ಗಳನ್ನು ಪೊಲೀಸರು ಪರಿಶೀಲಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ: ಹಸೆಮಣೆ ಏರಿದ ಕೆಲ ಗಂಟೆಗಳಲ್ಲೇ ನವವಿವಾಹಿತ ಸಾವು!