ತಿರುಪತ್ತೂರು(ತಮಿಳುನಾಡು): ನಗರದಲ್ಲಿ ಸಾವಿನ ಘಟನೆಯೊಂದು ನಡೆದಿದೆ. ಫ್ಲೇಮ್ ಲಿಲ್ಲಿ ಗಡ್ಡೆ ತಿಂದರೆ ದೇಹದಾರ್ಢ್ಯ ವೃದ್ಧಿಯಾಗುತ್ತದೆ ಎಂಬ ಸಂದೇಶವೊಂದು ಕಾನ್ಸ್ಟೇಬಲ್ ಅಭ್ಯರ್ಥಿ ಮತ್ತು ಆತನ ಗೆಳೆಯನಿಗೆ ಬಂದಿದೆ. ಈ ವಾಟ್ಸಾಪ್ ಸಂದೇಶವನ್ನು ನಂಬಿದ ಇಬ್ಬರೂ ಫ್ಲೇಮ್ ಲಿಲ್ಲಿ ಗಡ್ಡೆ ತಿಂದು ಅಸ್ವಸ್ಥರಾಗಿದ್ದಾರೆ. ತೀವ್ರ ಅಸ್ವಸ್ಥರಾದ ಕಾನ್ಸ್ಟೇಬಲ್ ಅಭ್ಯರ್ಥಿ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮತ್ತೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸರ ಪ್ರಕಾರ, ತಿರುಪತ್ತೂರಿನ ಮಿನ್ನೂರಿನ ಲೋಗನಾಥನ್ (25) ಮತ್ತು ಸಮೀಪದ ಗ್ರಾಮದ ರತ್ನಂ ಖಾಸಗಿ ಕ್ವಾರಿಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಲೋಗನಾಥನ್ ಪೊಲೀಸ್ ಪಡೆಗೆ ಸೇರಲು ಆಸಕ್ತಿ ಹೊಂದಿದ್ದರು. ಪೊಲೀಸ್ ಇಲಾಖೆ ನಡೆಸಿದ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಾಟ್ಸಾಪ್ ಸಂದೇಶವನ್ನು ನೋಡಿದ ಅವರು ಫ್ಲೇಮ್ ಲಿಲ್ಲಿ ಗಡ್ಡೆ ತಿಂದಿದ್ದಾರೆ. ಜೊತೆಗೆ ಕೆಲಸ ಮಾಡಿದ ರತ್ನಂ ಸಹ ಇದನ್ನು ತಿಂದಿದ್ದಾರೆ. ಕೂಡಲೇ ಇಬ್ಬರು ಅಸ್ವಸ್ಥರಾಗಿದ್ದರು.
ಅಸ್ವಸ್ಥೆಯಿಂದ ಬಳಲುತ್ತಿದ್ದ ಈ ಇಬ್ಬರನ್ನು ಕುಟುಂಬಸ್ಥರು ಚಿಕಿತ್ಸೆಗಾಗಿ ವೆಲ್ಲೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟೊತ್ತಿಗಾಗಲೇ ಲೋಗನಾಥನ್ ಸ್ಥಿತಿ ಗಂಭೀರವಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ರಾಜೀವ್ ಗಾಂಧಿ ಆಸ್ಪತ್ರೆಗೆ ತೆರಳುವಂತೆ ವೈದ್ಯರು ಸೂಚಿಸಿದ್ದರು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಲೋಗನಾಥನ್ ಮೃತಪಟ್ಟಿದ್ದಾರೆ. ಘಟನೆ ಕುರಿತು ಅಂಬೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಾಗಿದೆ.
ಪೊಲೀಸ್ ಪೇದೆಯಾಗುವ ಆಸಕ್ತಿ ಇದ್ದಿದ್ದರಿಂದ ಲೋಗನಾಥನ್ ನಿತ್ಯ ವ್ಯಾಯಾಮ ಮಾಡುತ್ತಿದ್ದರು. ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ದೇಹವನ್ನು ಕಟ್ಟುಮಸ್ತಾಗಿ ಉಳಿಸಿಕೊಳ್ಳಲು ಫ್ಲೇಮ್ ಲಿಲ್ಲಿ ಗಡ್ಡೆ ತಿನ್ನುವಂತೆ ವಾಟ್ಸಾಪ್‌ನಲ್ಲಿ ಸಂದೇಶ ಬಂದಿದೆ. ಹೀಗಾಗಿ ಅವರಿಬ್ಬರು ತಿಂದಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ಈ ಘಟನೆ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಓದಿ: ತಂಬಾಕು ತಂದ ಅವಾಂತರ.. ಗ್ರಾಹಕನನ್ನು ಹಿಡಿದು ಥಳಿಸಿ ಕೊಲೆ ಮಾಡಿದ ತಂದೆ-ಮಗ!