ನವದೆಹಲಿ : ಇಂದು ವಿಶ್ವ ಯೋಗ ದಿನಾಚರಣೆ ಹಿನ್ನೆಲೆ ರಾವಲ್ಪಿಂಡಿಯ ಸಾರ್ವಜನಿಕ ಉದ್ಯಾನವನದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಸಾಮೂಹಿಕ ಯೋಗಭ್ಯಾಸ ಮಾಡಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಿದ್ದಾರೆ. ಪುರುಷರು, ಮಹಿಳೆಯರು, ವೃದ್ಧರು ಮತ್ತು ಮಕ್ಕಳನ್ನೊಳಗೊಂಡತೆ ಉತ್ತಮ ಆರೋಗ್ಯ ಹಾಗೂ ದೈಹಿಕ, ಮಾನಸಿಕವಾಗಿ ಸದೃಢವಾಗಲು ಯೋಗಭ್ಯಾಸದಲ್ಲಿ ತೊಡಗಿದ್ದರು.
ಈ ಬಗ್ಗೆ ಈಟಿವಿ ಭಾರತದೊಂದಿಗೆ ದೂರವಾಣಿ ಮೂಲಕ ಮಾತನಾಡಿರುವ ಯೋಗ ಗ್ರ್ಯಾಂಡ್‌ಮಾಸ್ಟರ್ ಶಮ್‌ಶಾದ್ ಹೈದರ್, ಯೋಗದಿಂದ ಅನೇಕ ರೋಗಗಳನ್ನು ತಡೆಗಟ್ಟಬಹುದು. ರಾವಲ್ಪಿಂಡಿ, ಇಸ್ಲಾಮಾಬಾದ್ನಲ್ಲಿ ಸಾವಿರಾರು ಮಂದಿ ಯೋಗಾಭ್ಯಾಸ ಮಾಡುತ್ತಾರೆ ಎಂದಿದ್ದಾರೆ.
ಯೋಗ ಗುರು ಹೈದರ್ ತಮ್ಮ ಯೋಗ ಕ್ಲಬ್‌ನಲ್ಲಿ 20,000ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದಾರೆ. ಸುಮಾರು 100 ಶಿಕ್ಷಕರು ಇಲ್ಲಿ ಯೋಗ ತರಗತಿಗಳನ್ನು ನಡೆಸುತ್ತಾರಂತೆ. ರಾವಲ್ಪಿಂಡಿ ಮಾತ್ರವಲ್ಲ, ಕರಾಚಿ, ಮುಲ್ತಾನ್, ಫೈಸಲಾಬಾದ್ ಮತ್ತು ಲಾಹೋರ್‌ನಲ್ಲಿ ಯೋಗ ಹೆಚ್ಚು ಜನಪ್ರಿಯವಾಗಿದೆಯಂತೆ.
ರಾವಲ್ಪಿಂಡಿ ಯೋಗದೊಂದಿಗಿನ ಒಡನಾಟ ಇಂದು ನಿನ್ನೆಯದಲ್ಲ. ರಾವಲ್ಪಿಂಡಿ ನಗರದ ಸಮೀಪವಿರುವ ಬೆಟ್ಟದ 975 ಮೀಟರ್ ಎತ್ತರದ ಶಿಖರದ ಟಿಲ್ಲಾ ಜೋಗಿಯಾನ್ (‘ಯೋಗಿಗಳ ದಿಬ್ಬ’)ನಲ್ಲಿ ನಗರದ ಹೊರವಲಯದಲ್ಲಿ ಯೋಗ ವಿಶ್ವವಿದ್ಯಾಲಯವು 2,000 ವರ್ಷಗಳ ಹಿಂದಿನಿಂದಲೂ ಅಸ್ತಿತ್ವದಲ್ಲಿದೆ ಎಂದು ನಂಬಲಾಗಿದೆ.
ಬಾಬಾ ಗೋರಖನಾಥ್ ಮತ್ತು ಸಿಖ್ ಧರ್ಮದ ಗುರುನಾನಕ್, ಇತರ ಪ್ರಮುಖ ಸಂತರು ಮತ್ತು ಯೋಗಿಗಳು, ಟಿಲ್ಲಾ ಜೋಗಿಯಾನ್ನಲ್ಲಿ ಧ್ಯಾನ ಮಾಡಿದ್ದಾರೆಂದು ನಂಬಲಾಗಿದೆ.1947ರಲ್ಲಿ ಭಾರತದಿಂದ ಪಾಕ್ ವಿಭಜನೆಯಾಗುವವರೆಗೆ, ಸುಮಾರು 10,000 ಯೋಗಪಟುಗಳು ಪ್ರಾಚೀನ ಯೋಗ ವಿಶ್ವವಿದ್ಯಾಲಯದಲ್ಲಿ ಯೋಗಾಭ್ಯಾಸ ಮಾಡುತ್ತಿದ್ದರಂತೆ.
ಓದಿ:10 ನಿಮಿಷದಲ್ಲಿ 108 ಸಲ 'ಸೂರ್ಯ ನಮಸ್ಕಾರ'.. ವಿಶ್ವ ದಾಖಲೆ ಬರೆದ ಮಹಿಳೆ