ಶ್ರೀನಗರ (ಜಮ್ಮು ಕಾಶ್ಮೀರ) : ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡಿದ ಆರೋಪದಲ್ಲಿ ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ಉಗ್ರ ಯಾಸಿನ್ ಮಲಿಕ್‌ಗೆ ದೆಹಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಆ ಬಳಿಕ ಕಾಶ್ಮೀರದಲ್ಲಿ ನಾಗರಿಕರು ಪ್ರತಿಭಟನೆಗೆ ಮುಂದಾಗಿದ್ದು, ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಸದ್ಯ ಕಾಶ್ಮೀರ ಕಣಿವೆ ಭಾಗಶಃ ಸ್ತಬ್ಧವಾಗಿದ್ದು, ಶ್ರೀನಗರದಲ್ಲಿ ಶಾಪಿಂಗ್ ಮಾಲ್ ಗಳನ್ನು ಮುಚ್ಚಲಾಗಿದೆ.
ಜೊತೆಗೆ ಲಾಲ್ ಚೌಕ್ ಮತ್ತು ಯಾಸಿನ್ ಮಲಿಕ್ ವಾಸಿಸುವ ಮೈಸೂಮ ಪ್ರದೇಶ ಭಾಗಶಃ ಬಂದ್ ಆಗಿದೆ. ಸಾರಿಗೆ ಸಂಚಾರ ಮತ್ತು ಜನದಟ್ಟಣೆ ಕಡಿಮೆಯಾಗಿದ್ದು, ಸರ್ಕಾರಿ ಕಚೇರಿಗಳು ಮತ್ತು ಶಾಲೆಗಳು ಮಾತ್ರ ಕಾರ್ಯಾಚರಣೆ ನಡೆಸುತ್ತಿವೆ ಎಂದು ತಿಳಿದುಬಂದಿದೆ.
ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಮೊಬೈಲ್ ಇಂಟರ್ನೆಟ್ ವೇಗವನ್ನು ಕಡಿತಗೊಳಿಸಲಾಗಿದ್ದು, ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ನಿರಂತರವಾಗಿ ಗಸ್ತು ತಿರುಗುತ್ತಿದ್ದಾರೆ. ಈ ಮಧ್ಯೆ ನಿನ್ನೆ ಮಲಿಕ್‌ಗೆ ಶಿಕ್ಷೆ ಘೋಷಣೆಯಾಗುವ ಮುನ್ನ ಪ್ರತಿಭಟನೆ ಮತ್ತು ಕಲ್ಲು ತೂರಾಟದಲ್ಲಿ ತೊಡಗಿದ್ದ ಹತ್ತು ಮಂದಿ ಯುವಕರನ್ನು ಪೊಲೀಸರು ಬಂಧಿಸಿರುವುದಾಗಿ ಹೇಳಿದ್ದಾರೆ. ಎರಡು ಪ್ರಕರಣಗಳಲ್ಲಿ ಉಗ್ರ ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ ಮತ್ತು 10 ಲಕ್ಷ ರೂಪಾಯಿ ದಂಡ ವಿಧಿಸಿ ಎನ್‌ಐಎ ನ್ಯಾಯಾಲಯ ತೀರ್ಪು ನೀಡಿದೆ.
ಓದಿ : ಯಾಸಿನ್ ಮಲಿಕ್‌ಗೆ ಶಿಕ್ಷೆ: ಪಾಕ್ ಕೊತ ಕೊತ.. ಇದು ಪ್ರಜಾಪ್ರಭುತ್ವದ ಕರಾಳ ದಿನ ಎಂದ ಪಾಕ್ ಪ್ರಧಾನಿ