ಹೈದರಾಬಾದ್: ವಿದ್ಯಾರ್ಥಿಗಳ ಭವಿಷ್ಯ, ಪ್ರೀತಿಪಾತ್ರರ ಜೀವ, ಉದ್ಯೋಗ, ಕಡುಬಡವರ ಒಪ್ಪೊತ್ತಿನ ಊಟ, ಸಹಜ ಜೀವನವನ್ನೇ ಕಸಿದುಕೊಂಡ ಹೆಮ್ಮಾರಿ ಕೊರೊನಾ ಜಗತ್ತಿಗೆ ಕಾಲಿಟ್ಟು ಒಂದೂವರೆ ವರ್ಷ ಕಳೆದಿದೆ. ಶರವೇಗದಲ್ಲಿ ವಿಶ್ವದ 220 ರಾಷ್ಟ್ರಗಳನ್ನು ಆವರಿಸಿ, ವೈದ್ಯಕೀಯ ಕ್ಷೇತ್ರಕ್ಕೆ ಕೋವಿಡ್ ಸವಾಲೆಸೆದಿದೆ.
16.42 ಕೋಟಿ ಸೋಂಕಿತರು.. 34 ಲಕ್ಷ ಜನರು ಸಾವು
2019ರ ಡಿಸೆಂಬರ್ನಲ್ಲಿ ಚೀನಾದಲ್ಲಿ ಹುಟ್ಟಿದ ಮಹಾಮಾರಿಗೆ ಇಲ್ಲಿಯವರೆಗೆ ಪ್ರಪಂಚದಾದ್ಯಂತ ಒಳಗಾಗಿದ್ದು ಬರೋಬ್ಬರಿ 16,42,62,338 ಮಂದಿ ಎಂದರೆ ನಂಬಲೇ ಬೇಕು. ಇವರಲ್ಲಿ ವೈರಸ್ಗೆ ತುತ್ತಾದ 34,03,994 ಜನರು ತಮ್ಮ ಉಸಿರು ನಿಲ್ಲಿಸಿದ್ದಾರೆ. 16.42 ಕೋಟಿ ಸೋಂಕಿತರಲ್ಲಿ 14,29,79,061 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.
ಅಮೆರಿಕದಲ್ಲಿ ಕಡಿಮೆಯಾದ ಸಾವು ನೋವು
ಆರಂಭದಿಂದಲೂ ಕೋವಿಡ್ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಇದೀಗ ಸಾವು-ನೋವು ಕಡಿಮೆಯಾಗಿ ಸಹಜ ಸ್ಥಿತಿಯತ್ತ ದೇಶ ಮರಳುತ್ತಿದೆ. ಶಾಲೆಗಳಲ್ಲಿ ಹೊರತುಪಡಿಸಿ ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡವರು ರಾಷ್ಟ್ರದೊಳಗೆ ಎಲ್ಲಿಬೇಕಾದರೂ ಮಾಸ್ಕ್ ಇಲ್ಲದೇ, ದೈಹಿಕ ಅಂತರ ಕಾಯ್ದುಕೊಳ್ಳದೇ ತಿರುಗಾಡಲು ತನ್ನ ಪ್ರಜೆಗಳಿಗೆ ದೊಡ್ಡಣ್ಣ ಅನುಮತಿ ನೀಡಿದ್ದಾರೆ. ಯುಸ್ನಲ್ಲಿ ದಿನವೊಂದರಲ್ಲಿ ಇದೀಗ 20 ಸಾವಿರ ಸನಿಹ ಕೇಸ್ಗಳು ಪತ್ತೆಯಾಗುತ್ತಿದ್ದು, 400 ಸನಿಹ ಸಾವು ವರದಿಯಾಗುತ್ತಿದೆ.
ಇದನ್ನೂ ಓದಿ: ಸಂಪೂರ್ಣವಾಗಿ ಲಸಿಕೆ ಪಡೆದವರು ಮಾಸ್ಕ್ ಧರಿಸಬೇಕಿಲ್ಲ- ಅಮೆರಿಕ
ಭಾರತದಲ್ಲಿ ಸರ್ಕಾರ, ಜನರ ನಿರ್ಲಕ್ಷ್ಯ ಪರಿಣಾಮ ಸೋಂಕು ಹೆಚ್ಚಳ
ಕಳೆದ ವರ್ಷದ ಕಠಿಣ ಲಾಕ್ಡೌನ್, ಕೋವಿಡ್ ಮಾರ್ಗಸೂಚಿಗಳ ಪಾಲನೆಯಿಂದಾಗಿ ಭಾರತದಲ್ಲಿ ಹತೋಟಿಗೆ ಬಂದಿದ್ದ ಕೊರೊನಾ ಇದೀಗ ಅಬ್ಬರಿಸುತ್ತಿದೆ. ದೇಶದಲ್ಲಿ ದಿನವೊಂದರಲ್ಲಿ ವರದಿಯಾಗುತ್ತಿದ್ದ ಒಂದು ಲಕ್ಷ ಸನಿಹ ಕೇಸ್, ಸಾವಿರ ಸಾವುಗಳು 2021ರ ಫೆಬ್ರವರಿಯಲ್ಲಿ 20 ಸಾವಿರ ಕೇಸ್, 200ಕ್ಕೂ ಕಡಿಮೆ ಸಾವಿಗೆ ಇಳಿಕೆಯಾಗಿತ್ತು. ಕೊರೊನಾವನ್ನು ಹೊಡೆದೋಡಿಸಿದ್ದೇವೆ ಎಂದು ಬೀಗಿದ ಭಾರತದಲ್ಲಿ ಸರ್ಕಾರ ಹಾಗೂ ಜನರ ನಿರ್ಲಕ್ಷ್ಯ, ರಾಜಕೀಯ ರ್ಯಾಲಿಗಳು, ಧಾರ್ಮಿಕ ಸಮಾರಂಭಗಳ ಪ್ರತಿಫಲವಾಗಿ ಇದೀಗ 24 ಗಂಟೆಗಳಲ್ಲಿ 3-4 ಲಕ್ಷ ಸೋಂಕಿತರು ಪತ್ತೆಯಾಗುತ್ತಿದ್ದು, 4 ಸಾವಿರ ಜನರು ಬಲಿಯಾಗುತ್ತಿದ್ದಾರೆ. ವಿಶ್ವದ ಯಾವುದೇ ಕೋವಿಡ್ ಪೀಡಿತ ರಾಷ್ಟ್ರದಲ್ಲೂ ಕೂಡ ಇಷ್ಟೊಂದು ದೈನಂದಿನ ಸಾವು-ನೋವು ವರದಿಯಾಗಿರಲಿಲ್ಲ. ಇನ್ನು ವಿದೇಶಗಳಿಗೆ ಲಸಿಕೆ ರಫ್ತು ಮಾಡಿ, ಇದೀಗ ತನ್ನ ಜನರಿಗೆ ಲಸಿಕೆ ಪೂರೈಸಲಾಗದೆ ನಿಧಾನಗತಿಯಲ್ಲಿ ಭಾರತ ವ್ಯಾಕ್ಸಿನೇಷನ್ ನಡೆಸುತ್ತಿದೆ.
ಪ್ರಪಂಚದ ಕೋವಿಡ್ ಕೇಸ್ಗಳ ಸಂಖ್ಯೆಯಲ್ಲಿ ಮೂರನೇ ಹಾಗೂ ಮೃತರ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್ನಲ್ಲಿ ದಿನನಿತ್ಯ 33 ಸಾವಿರ ಪ್ರಕರಣಗಳು ಹಾಗೂ ಸಾವಿರ ಸಾವು ವರದಿಯಾಗುತ್ತಿದೆ. ಅಮೆರಿಕ, ಭಾರತ, ಬ್ರೆಜಿಲ್, ಫ್ರಾನ್ಸ್, ರಷ್ಯಾ, ಬ್ರಿಟನ್, ಇಟಲಿ, ಮೆಕ್ಸಿಕೋ- ಇವು ಒಂದು ಲಕ್ಷಕ್ಕೂ ಅಧಿಕ ಜನರನ್ನು ಕೋವಿಡ್ಗೆ ಕಳೆದುಕೊಂಡ ರಾಷ್ಟ್ರಗಳಾಗಿವೆ.
ಚೀನಾದಲ್ಲಿ ಮೊದಲು ಕೊರೊನಾ ಜನ್ಮ ತಾಳಿದ್ದರೂ ಅಲ್ಲಿ ಈವರೆಗೆ 90,847 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 4,636 ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ವಿಶ್ವದ ಟಾಪ್-10 ಕೋವಿಡ್ ಪೀಡಿತ ದೇಶಗಳ ಮಾಹಿತಿ
ರಾಷ್ಟ್ರ | ಕೋವಿಡ್ ಪ್ರಕರಣಗಳು | ಮೃತರ ಸಂಖ್ಯೆ |
ಅಮೆರಿಕ | 3,37,47,222 | 6,00,529 |
ಭಾರತ | 2,52,27,970 | 2,78,751 |
ಬ್ರೆಜಿಲ್ | 1,56,61,106 | 4,36,862 |
ಫ್ರಾನ್ಸ್ | 58,81,137 | 1,07,812 |
ಟರ್ಕಿ | 51,27,548 | 44,983 |
ರಷ್ಯಾ | 49,49,573 | 1,16,211 |
ಯುಕೆ | 44,52,756 | 1,27,684 |
ಇಟಲಿ | 41,62,576 | 1,24,296 |
ಸ್ಪೇನ್ | 36,15,860 | 79,432 |
ಜರ್ಮನಿ | 36,08,292 | 86,870 |