ನವದೆಹಲಿ: ಇಂದು ವಿಶ್ವ ವನ್ಯ ಜೀವಿಗಳ ದಿನ. ವನ್ಯಜೀವಿಗಳು ಮತ್ತು ಅರಣ್ಯ ಸಂಪತ್ತಿನ ಬಗ್ಗೆ ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವದಾದ್ಯಂತ ವಿಶ್ವ ವನ್ಯಜೀವಿ ದಿನವನ್ನು ಪ್ರತಿವರ್ಷ ಮಾರ್ಚ್ 3ರಂದು ಆಚರಿಸಲಾಗುತ್ತದೆ. ನಮ್ಮ ಪರಿಸರ ವ್ಯವಸ್ಥೆಯ ಭಾಗವಾದ ವನ್ಯಜೀವಿಗಳ ಉಳಿವಿಗೆ ಈ ದಿನದಂದು ವಿಶೇಷ ಜಾಗೃತಿ ಮೂಡಿಸಲಾಗುತ್ತದೆ.
ಪ್ರತಿ ವರ್ಷ ವಿಶ್ವ ವನ್ಯಜೀವಿ ದಿನ ಆಚರಣೆ ವೇಳೆ ಒಂದು ಘೋಷವಾಕ್ಯವನ್ನು ಇಟ್ಟುಕೊಳ್ಳಲಾಗುತ್ತದೆ. 2022ರ ವಿಶ್ವ ವನ್ಯಜೀವಿಗಳ ದಿನಕ್ಕೆ 'ಪರಿಸರ ವ್ಯವಸ್ಥೆಯ ಪುನಃಸ್ಥಾಪನೆಗಾಗಿ ಪ್ರಮುಖ ಜೀವಿಗಳನ್ನು ಮರುಪಡೆಯುವುದು' (Recovering key species for ecosystem restoration) ಎಂಬ ಘೋಷವಾಕ್ಯವನ್ನು ಇಟ್ಟುಕೊಳ್ಳಲಾಗಿದೆ. ಈ ಘೋಷವಾಕ್ಯವನ್ನು ಅಳಿವಿನಂಚಿನಲ್ಲಿರುವ ಕೆಲವು ಕಾಡು ಪ್ರಾಣಿಗಳು ಮತ್ತು ಸಸ್ಯಗಳನ್ನು ಸಂರಕ್ಷಿಸುವ ಸಲುವಾಗಿ ಇಟ್ಟುಕೊಳ್ಳಲಾಗಿದೆ.
2021ರಲ್ಲಿ ವಿಶ್ವ ವನ್ಯಜೀವಿ ದಿನವನ್ನು 'ಅರಣ್ಯ ಮತ್ತು ಜೀವನೋಪಾಯಗಳು: ಜನರು ಮತ್ತು ಭೂಮಿಯನ್ನು ಉಳಿಸಿಕೊಳ್ಳುವುದು' ಎಂಬ ಘೋಷ ವಾಕ್ಯದೊಂದಿಗೆ ಆಚರಣೆ ಮಾಡಲಾಗಿತ್ತು.
ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿಯೂ ಬಡತನ ನಿವಾರಣೆ, ಹಸಿವು ನಿವಾರಣೆ, ಸಂಪನ್ಮೂಲಗಳ ಸುಸ್ಥಿರ ಬಳಕೆ, ಭೂಮಿಯಲ್ಲಿ ಜೀವಿಗಳನ್ನು ಸಂರಕ್ಷಣೆಯ ಅಂಶಗಳನ್ನು ಎತ್ತಿ ಹಿಡಿಯಲಾಗಿದೆ. ಈ ಮೂಲಕ ಜೀವ ವೈವಿಧ್ಯಗಳನ್ನು ರಕ್ಷಿಸುವ ಕೆಲಸವನ್ನು ವಿಶ್ವ ಸಂಸ್ಥೆಯೂ ಮಾಡುತ್ತಿದೆ.
ಇದನ್ನೂ ಓದಿ: ನಾಸಾದ ಮಾನವ ಸಹಿತ ಚಂದ್ರಯಾನ ಯೋಜನೆ 2026 ಕ್ಕೆ ಮುಂದೂಡಿಕೆ
ವಿಶ್ವ ವನ್ಯಜೀವಿಗಳ ದಿನದ ಇತಿಹಾಸ: 2013ರ ಡಿಸೆಂಬರ್ 20ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಮಾರ್ಚ್ 3 ಅನ್ನು ವಿಶ್ವ ವನ್ಯಜೀವಿ ಎಂದು ಘೋಷಿಸಿದೆ. ವನ್ಯಜೀವಿಗಳನ್ನು ರಕ್ಷಿಸುವ ಸಿಐಟಿಇಎಸ್ (CITES) ಒಪ್ಪಂದಕ್ಕೆ ಮಾರ್ಚ್ 3ರಂದು ಸಹಿಹಾಕಿದ ಕಾರಣಕ್ಕಾಗಿ ಈ ದಿನವನ್ನು ವಿಶ್ವ ವನ್ಯಜೀವಿಗಳ ದಿನವನ್ನಾಗಿ ಘೋಷಿಸಲಾಗಿದೆ.
ಈಗ ಪ್ರಸ್ತುತ ಸುಮಾರು 8000ಕ್ಕೂ ಹೆಚ್ಚು ಪ್ರಭೇದದ ಕಾಡು ಪ್ರಾಣಿಗಳು ಮತ್ತು ಸಸ್ಯಗಳನ್ನು ಅಳಿವಿನಂಚಿನಲ್ಲಿವೆ ಎಂದು ಘೋಷಿಸಲಾಗಿದೆ. 30,000ಕ್ಕೂ ಪ್ರಭೇದಗಳು ಮುಂದಿನ ದಿನಗಳಲ್ಲಿ ಅಳಿವಿನಂಚಿಗೆ ತಲುಪುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.