ನಾಗ್ಪುರ: ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಬಿದಿರಿನಿಂದ ಎಥೆನಾಲ್ ತಯಾರಿಸಿ ಅದನ್ನು ವಿಮಾನಗಳಿಗೆ ಇಂಧನವಾಗಿ ಬಳಸಲಾಗುವುದು. ಮುಂದಿನ ಎರಡು, ಮೂರು ವರ್ಷದೊಳಗೆ ದೇಶದ ಎಲ್ಲ ವಿಮಾನಗಳು ಬಿದಿರಿನಿಂದ ತಯಾರಿಸಿದ ಎಥೆನಾಲ್ ಇಂಧನದ ಮೂಲಕವೇ ಹಾರಾಡಲಿವೆ ಎಂದು ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ನಾಗ್ಪುರದಲ್ಲಿ ಆತ್ಮನಿರ್ಭರ್ ಭಾರತ ಅಭಿಯಾನದ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಆತ್ಮನಿರ್ಭರ್ ಭಾರತ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರಲು ತಳಮಟ್ಟದಿಂದ ಕೆಲಸ ಮಾಡಬೇಕು. ನಿಮ್ಮ ಜವಾಬ್ದಾರಿಗಳ ಬಗ್ಗೆ ಎಚ್ಚರವಿರಲಿ. ಪ್ರತಿಯೊಬ್ಬರೂ ತಾವು ಏನಾದರೂ ಮಾಡಬೇಕೆಂಬ ಹಂಬಲ ಹೊಂದಿರಬೇಕು ಎಂದರು.
ರಾಜಕೀಯವಾಗಿ ಮಾತನಾಡುವವರಿಗೆ ಕೊರತೆಯಿಲ್ಲ. ಆದರೆ, ಮಾತನಾಡುವುದಕ್ಕಿಂತ ಹೆಚ್ಚಾಗಿ ಕೆಲಸ ಮಾಡಿ. ನಾನು ಸದಾ ಮಿತಿಗಳನ್ನು ಮೀರಿದ ಪರಿಕಲ್ಪನೆಗಳನ್ನು ಪ್ರಸ್ತಾಪಿಸುತ್ತೇನೆ. ಆದರೆ, ಯಾರೂ ನನ್ನನ್ನು ನಂಬುವುದಿಲ್ಲ, ಅನೇಕರು ನನ್ನ ಪರಿಕಲ್ಪನೆಗಳನ್ನು ಒಪ್ಪುವುದಿಲ್ಲ. ಗಡ್ಚಿರೋಲಿ ಪ್ರದೇಶದ ಬಿದಿರಿನಿಂದ ಎಥೆನಾಲ್ ತಯಾರಿಸಿ ಅದನ್ನು ವಿಮಾನಗಳಿಗೆ ಇಂಧನವಾಗಿ ಬಳಸಲಾಗುವುದು. ಇನ್ನೆರಡು ವರ್ಷದೊಳಗೆ ದೇಶದ ಎಲ್ಲ ವಿಮಾನಗಳು ಬಿದಿರಿನಿಂದ ತಯಾರಿಸಿದ ಎಥೆನಾಲ್ ಇಂಧನದ ಮೂಲಕ ಹಾರಾಡಲಿವೆ. ಆತ್ಮನಿರ್ಭರ್ ಭಾರತ ಅಭಿಯಾನ, ಸೇವೆ ಮತ್ತು ಅಭಿವೃದ್ಧಿಯಿಂದ ಕೂಡಿದೆ ಹೇಳಿದರು.
ಕಾರ್ಯಕ್ರಮದಲ್ಲಿ ನಾಗ್ಪುರ ಮೇಯರ್ ಸಂದೀಪ್ ಜೋಶಿ, ಬಿಜೆಪಿ ನಗರ ಅಧ್ಯಕ್ಷ ಪ್ರವೀಣ್ ದಟ್ಕೆ, ಶಾಸಕ ಗಿರೀಶ್ ವ್ಯಾಸ್ ಮತ್ತು ಇತರ ಬಿಜೆಪಿ ಪದಾಧಿಕಾರಿಗಳು ಭಾಗವಹಿಸಿದ್ದರು.