ಬಲ್ರಾಮ್ಪುರ್(ಛತ್ತೀಸ್ಗಢ): ಆಧುನಿಕ ಜಗತ್ತಿನಲ್ಲಿ ಎಲ್ಲವೂ ಸರಳ, ಸುಲಭವಾಗಿ ಲಭ್ಯವಾಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಆದರೆ, ದೇಶದ ಕೆಲವೊಂದು ರಾಜ್ಯಗಳಲ್ಲಿ ವಾಸವಾಗಿರುವ ಬುಡಕಟ್ಟು ಜನಾಂಗ ಈಗಲೂ ಮೂಲ ಸೌಲಭ್ಯಗಳಿಂದ ವಂಚಿತವಾಗಿವೆ. ಅಂತಹ ಜನರಿಗೆ ವೈದ್ಯ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು ಹತ್ತಾರು ಕಿಲೋ ಮೀಟರ್ ನಡೆದು ಹೋಗಿ, ಆರೋಗ್ಯ ತಪಾಸಣೆ ನಡೆಸುವ ಕೆಲಸ ಮಾಡ್ತಿವೆ. ಸದ್ಯ ಛತ್ತೀಸ್ಗಢದ ಬಲ್ರಾಮ್ಪುರದಲ್ಲಿ ಅಂತಹದೊಂದು ಘಟನೆ ನಡೆದಿದೆ.
ಮಹಿಳಾ ಆರೋಗ್ಯ ಕಾರ್ಯಕರ್ತೆಯರಿಬ್ಬರು ತಮ್ಮ ಸಿಬ್ಬಂದಿಯೊಂದಿಗೆ ಅರಣ್ಯ ಪ್ರದೇಶದ ಮೂಲಕ 10 ಕಿಲೋ ಮೀಟರ್ ನಡೆದು ಹೋಗಿ ಬುಡಕಟ್ಟು ಜನರ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಬಲ್ರಾಮ್ಪುರ್ ಜಿಲ್ಲೆಯ ಗುಡ್ಡಗಾಡು ಪ್ರದೇಶದ ಝಸ್ವಾಲಾ ಗ್ರಾಮ ಅರಣ್ಯ ಪ್ರದೇಶದಲ್ಲಿ ವಾಸವಾಗಿದ್ದು, ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಹೀಗಾಗಿ, ಜಿಲ್ಲಾಡಳಿತ ಆರೋಗ್ಯ ಶಿಬಿರ ಆಯೋಜನೆ ಮಾಡಿರುವ ಕಾರಣ ವೈದ್ಯ ಸಿಬ್ಬಂದಿ, 10 ಕಿಲೋ ಮೀಟರ್ ದೂರ ಕಡಿದಾದ ಅರಣ್ಯ ಪ್ರದೇಶದ ಮೂಲಕ ತೆರಳಿ, ಆರೋಗ್ಯ ತಪಾಸಣೆ ನಡೆಸಿದ್ದಾರೆ.
ಇದನ್ನೂ ಓದಿ: 'ತಲೆಗೆ ಪಿಸ್ತೂಲಿಟ್ಟು ಬಾಡಿಗೆಗಿದ್ದ ಯುವತಿ ಮೇಲೆ ಅತ್ಯಾಚಾರ': ಬೆಂಗಳೂರಿನಲ್ಲಿ ಮನೆ ಮಾಲೀಕ ಅರೆಸ್ಟ್
ಛತ್ತೀಸ್ಗಡದ ಬಲ್ರಾಮ್ಪುರ್ ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿಯಾಗಿ ಈ ಶಿಬಿರ ಆಯೋಜನೆ ಮಾಡಿದೆ. ಸಬಗ್ ಗ್ರಾಮ ಪಂಚಾಯ್ತಿ ವ್ಯಾಪ್ತಿಗೊಳಪಡುವ ಝಲ್ವಾಸಾ ಗ್ರಾಮ ಸುಮಾರು 10 ಕಿಲೋ ಮೀಟರ್ ದೂರದ ಕಡಿದಾದ ಅರಣ್ಯ ಪ್ರದೇಶದಲ್ಲಿದೆ. ಇಲ್ಲಿ ಸುಮಾರು 28 ಕುಟುಂಬಗಳು ವಾಸವಾಗಿದ್ದು, ಇದರಲ್ಲಿ ಬಹುತೇಕ ಕುಟುಂಬ ಹಿಂದುಳಿದ ಸಮುದಾಯವಾಗಿವೆ.
ಈ ಗ್ರಾಮಕ್ಕೆ ತೆರಳಿರುವ ಮಹಿಳಾ ಆರೋಗ್ಯ ಕಾರ್ಯಕರ್ತೆಯರಾದ ಹಲ್ಮಿ ಟರ್ಕಿ ಮತ್ತು ಸಚಿತಾ ಸಿಂಗ್ ಮಾತನಾಡಿ, ಸುಮಾರು 10 ಕಿಲೋ ಮೀಟರ್ ನಡೆದು ಬಂದು, ಇಲ್ಲಿ ಆರೋಗ್ಯ ಶಿಬಿರದಲ್ಲಿ ಭಾಗಿಯಾಗಿದ್ದೇವೆ. ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಲು ಜಿಲ್ಲಾ ಆರೋಗ್ಯ ಇಲಾಖೆ ಈ ಶಿಬಿರ ಆಯೋಜನೆ ಮಾಡಿದೆ ಎಂದಿದ್ದಾರೆ.
ಬಲ್ರಾಮ್ಪುರ್ ಜಿಲ್ಲಾಧಿಕಾರಿ ಕುಂದನ್ ಕುಮಾರ್, ಮಹಿಳಾ ಆರೋಗ್ಯ ಕಾರ್ಯಕರ್ತೆಯರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದಿದ್ದಾರೆ. ಜೊತೆಗೆ ಬುಡಕಟ್ಟು ಜನಾಂಗ ವಾಸ ಮಾಡುತ್ತಿರುವ ಸ್ಥಳಗಳಲ್ಲಿ ಇಂತಹ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ ಮಾಡ್ತಿದ್ದೇವೆ ಎಂದರು. ಜನರು ರಕ್ತದೊತ್ತಡ, ಬಿಪಿ, ರಕ್ತದಲ್ಲಿನ ಸಕ್ಕರೆಯ ಮಟ್ಟ ಸೇರಿದಂತೆ ಅವರ ಆರೋಗ್ಯ ಸ್ಥಿತಿಯ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.