ಶಹಜಹಾನಪುರ(ಉತ್ತರ ಪ್ರದೇಶ): ಬರೋಬ್ಬರಿ 27 ವರ್ಷಗಳ ಹಿಂದೆ ಅಂದರೆ 12ನೇ ವಯಸ್ಸಿನಲ್ಲಿದ್ದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆದಿತ್ತು. ಅಷ್ಟೇ ಏಕೆ ಇಬ್ಬರು ದುಷ್ಕರ್ಮಿಗಳಿಂದ ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿ ಗಂಡು ಮಗುವಿಗೂ ಜನ್ಮ ನೀಡಿದ್ದಳು. ಆಗ ಸುಮ್ಮನಿದ್ದ ಮಹಿಳೆ ಈಗ ಅತ್ಯಾಚಾರ ಎಸಗಿದವರ ವಿರುದ್ಧ ದೂರು ನೀಡಿದ್ದು, ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾಳೆ.
ಸಹೋದರಿ ಹಾಗೂ ಸೋದರ ಮಾವನೊಂದಿಗೆ ವಾಸವಾಗಿದ್ದ ಬಾಲಕಿ ಮೇಲೆ 27 ವರ್ಷಗಳ ಹಿಂದೆ ಇಬ್ಬರು ದುಷ್ಕರ್ಮಿಗಳು ಮನೆಗೆ ನುಗ್ಗಿ ಅತ್ಯಾಚಾರವೆಸಗಿದ್ದರು. ಇದಾದ ಬಳಿಕ ಆ ಬಾಲಕಿ ಮಗುವೊಂದಕ್ಕೆ ಜನ್ಮ ಸಹ ನೀಡಿದ್ದಳು. ಇದೀಗ ಆ ಮಗು ಬೆಳೆದು ದೊಡ್ಡದಾಗಿದೆ. ತನ್ನ ತಂದೆ ಯಾರು ಎಂದು ತಾಯಿಯನ್ನು ಪ್ರಶ್ನಿಸಿದೆ. ಇದರಿಂದ ನೊಂದ ತಾಯಿ ಈಗ 27 ವರ್ಷಗಳ ಹಿಂದೆ ಆದ ಅನ್ಯಾಯದ ವಿರುದ್ಧ ಸಿಡಿದೆದ್ದಿದ್ದಾಳೆ. ಅಷ್ಟೇ ಅಲ್ಲ ಅಂದು ಅತ್ಯಾಚಾರ ಎಸೆಗಿದ ದುಷ್ಕರ್ಮಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾಳೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಸೂಪರಿಂಟೆಂಡೆಂಟ್ ಸಂಜಯ್ ಕುಮಾರ್ ಮಾಹಿತಿ ನೀಡಿದ್ದು, ಮಹಿಳೆ ದೂರಿನನ್ವಯ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಕೃತ್ಯದಲ್ಲಿ ಬಾಲಕಿ ಸಹೋದರ ಕೂಡ ಭಾಗಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಖಡ್ಗದಿಂದ ಕೇಕ್ ಕತ್ತರಿಸಿ ಬರ್ತಡೇ ಆಚರಿಸಿಕೊಂಡ ಯುವಕ - ವಿಡಿಯೋ ವೈರಲ್
1994ರಲ್ಲಿ ನಡೆದಿರುವ ಘಟನೆ ಇದಾಗಿದ್ದು, ಆಗ ಜನಿಸಿದ ಮಗುವನ್ನ ಶಹಾಬಾದ್ ಪೊಲೀಸ್ ಠಾಣೆಯ ಉಧಂಪುರದ ವ್ಯಕ್ತಿಯೊಬ್ಬನಿಗೆ ನೀಡಲಾಗಿತ್ತು. ಈ ಘಟನೆ ಆದ ಬಳಿಕ ಸಂತ್ರಸ್ತೆ ವಿವಾಹವಾಗಿದ್ದಳು. 10 ವರ್ಷಗಳ ಕಾಲ ಸುಖಕರ ಜೀವನವನ್ನು ನಡೆಸಿದ್ದಳು, ಆದರೆ10 ವರ್ಷಗಳ ಬಳಿಕ ಸಂತ್ರಸ್ತೆಯ ಗಂಡನಿಗೆ ನಿಜ ವಿಚಾರ ಗೊತ್ತಾಗಿ ಮಹಿಳೆಗೆ ವಿಚ್ಛೇದನ ನೀಡಿದ್ದಾನೆ. ಹೀಗಾಗಿ ಅನಿವಾರ್ಯವಾಗಿ ಸಂತ್ರಸ್ತೆ ಮಹಿಳೆ ಉಧಂಪುರಕ್ಕೆ ವಾಪಸ್ ಆಗಿದ್ದಳು.
ಅತ್ತ ಅತ್ಯಾಚಾರಕ್ಕೊಳಗಾದಾಗ ಆಗಿದ್ದ ಮಗು ಈಗ ಬೆಳೆದು ದೊಡ್ಡದಾಗಿದೆ. ಈಗ ಆತ ತನ್ನ ತಾಯಿ ಮತ್ತು ತಂದೆಯ ವಿಚಾರ ತಿಳಿದುಕೊಳ್ಳಲು ಮುಂದಾಗಿದ್ದಾನೆ. ಅಷ್ಟೇ ಅಲ್ಲ ತನಗೆ ಜನ್ಮ ನೀಡಿದ ತಾಯಿ ಅದೇ ಊರಿನಲ್ಲಿ ಇರುವ ಬಗ್ಗೆ ಮಾಹಿತಿ ಪಡೆದಿದ್ದಾನೆ. ಈ ವಿಚಾರ ತಾಯಿಗೂ ಗೊತ್ತಾಗಿದೆ. ಇದರಿಂದ ಮನನೊಂದ ಆಕೆ ಈ ಹಿಂದೆ ತನ್ನ ಮೇಲಾದ ಅತ್ಯಾಚಾರ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾಳೆ. ಅಷ್ಟೇ ಅಲ್ಲ, ಆ ಮಗುವಿನ ತಂದೆ ಯಾರೆಂಬುದನ್ನು ಪತ್ತೆ ಹಚ್ಚಿ ಮಾಹಿತಿ ನೀಡುವಂತೆ ಒತ್ತಾಯಿಸಿದ್ದಾಳೆ.
ತಾಯಿಯ ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಬಾಲಕನ ಡಿಎನ್ಎ ಪರೀಕ್ಷೆ ನಡೆಸಲು ನಿರ್ಧರಿಸಿದ್ದಾರೆ.