ಪುಣೆ(ಮಹಾರಾಷ್ಟ್ರ) : ಮಹಿಳೆಯೊಬ್ಬರು ಸೀರೆ ಧರಿಸಿ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ನೋಡಿದ ನಂತರ, ಈ ಮಹಿಳೆ ಯಾರು ಎಂದು ಅನೇಕ ಜನರು ಆಶ್ಚರ್ಯ ಪಡುತ್ತಿದ್ದರು. ಈಟಿವಿ ಭಾರತ ತಂಡ ಈ ವಿಡಿಯೋದಲ್ಲಿರುವ ಮಹಿಳೆಯನ್ನು ಭೇಟಿಯಾಗಿ ಮಾತನಾಡಿಸಿದೆ. ಇವರ ಹೆಸರು ಶಾರ್ವರಿ ಇನಾಂದಾರ್. ವೃತ್ತಿಯಲ್ಲಿ ವೈದ್ಯರಾದ ಶಾರ್ವರಿಗೆ ವ್ಯಾಯಾಮದ ಬಗ್ಗೆ ಅಪಾರ ಉತ್ಸಾಹವಿದೆ.
ಶಾರ್ವರಿ ಎಂದಿಗೂ ಜಿಮ್‌ಗೆ ಹೋಗುವುದನ್ನು ಒಂದು ದಿನವೂ ತಪ್ಪಿಸಿಲ್ಲವಂತೆ. ಇದೇ ಅವರ ಸದೃಢ, ಆರೋಗ್ಯವಂತ ದೇಹದ ಗುಟ್ಟಾಗಿದೆ. ಶಾರ್ವರಿ ತನ್ನ ವ್ಯಾಯಾಮದ ಪ್ರಯಾಣದ ಬಗ್ಗೆ ಉತ್ಸಾಹದಿಂದ ಹೇಳುತ್ತಾರೆ. ಉತ್ತಮ ವ್ಯಕ್ತಿತ್ವಕ್ಕಾಗಿ ವ್ಯಾಯಾಮ ಮಾಡಲು ಸಹ ಅವರು ಶಿಫಾರಸು ಮಾಡುತ್ತಾರೆ.
ವೃತ್ತಿಯಲ್ಲಿ ವೈದ್ಯರಾಗಿರುವ ಶಾರ್ವರಿ ತರಬೇತಿ ಪಡೆದ ವೇಟ್ ಲಿಫ್ಟರ್ ಕೂಡ ಹೌದು. ಪ್ರತಿನಿತ್ಯ ವ್ಯಾಯಾಮ ಮಾಡುವ ಶಾರ್ವರಿ ನಾಲ್ಕು ಬಾರಿ ಸ್ಟ್ರಾಂಗ್ ವುಮನ್ ಪ್ರಶಸ್ತಿ ಸಹ ಗೆದ್ದಿದ್ದಾರೆ. ಪುಣೆಯಲ್ಲಿನ ಡಯಟ್ ಕ್ಲಿನಿಕ್ ಮೂಲಕ ಆರೋಗ್ಯವಾಗಿರಲು ಸರಿಯಾದ ಆಹಾರದ ಮಹತ್ವವನ್ನು ಶಾರ್ವರಿ ಜನರಿಗೆ ತಿಳಿಸಿಕೊಡುತ್ತಿದ್ದಾರೆ.
ಶಾರ್ವರಿ ಆರೋಗ್ಯವಂತ ಜೀವನಶೈಲಿಗೆ ಒಂದು ಜೀವಂತ ಉದಾಹರಣೆಯಂತಿದ್ದಾರೆ. ಅವರು ಆರೋಗ್ಯಕರ ವ್ಯಕ್ತಿತ್ವಕ್ಕಾಗಿ ಒಂದು ಆಂದೋಲನವನ್ನು ನಡೆಸುತ್ತಿದ್ದಾರೆ. ಉತ್ತಮ ಆರೋಗ್ಯದ ಸಂದೇಶವನ್ನು ರವಾನಿಸುತ್ತಿರುವ ಶಾರ್ವರಿ ಸಮಾಜಕ್ಕೆ ಮಾದರಿಯಾಗಿದ್ದಾರೆ.