ಬೆರ್ಹಾಂಪುರ: ಮೂರು ದಿನಗಳ ಹಿಂದೆ ಹಂಸಾಪುರದಲ್ಲಿ ಉದ್ಯಮಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಹಂತಕರನ್ನು ಬಂಧಿಸುವಂತೆ ಒತ್ತಾಯಿಸಿ ಸೋಮವಾರ ನಡೆದ ಪ್ರತಿಭಟನೆ ವೇಳೆ ಉದ್ಯಮಿ ಜತೆ ಮುಂದಿನ ತಿಂಗಳು ಹಸೆಮಣೆ ಏರಬೇಕಾಗಿದ್ದ ಮಹಿಳೆ ವಿಷ ಸೇವಿಸಿದ್ದಳು. ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ನಡೆದಿದೆ.
ಒಡಿಶಾದ ಗಂಜಾಂ ಜಿಲ್ಲೆಯ ಛತ್ರಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಂಸಾಪುರದಲ್ಲಿ ನಿನ್ನೆ ಉದ್ಯಮಿಯೊಬ್ಬರ ಕೊಲೆಯ ಪ್ರಮುಖ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆ ವೇಳೆ ಸ್ಥಳೀಯರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರಿಂದ ಪರಿಸ್ಥಿತಿ ಗಂಭೀರವಾಗಿತ್ತು.
ಶುಕ್ರವಾರ ತಡರಾತ್ರಿ ಛತ್ರಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಂಸಾಪುರ ಬಳಿ ಸಿಮೆಂಟ್ ಉದ್ಯಮಿ ಕೃಷ್ಣ ಚಂದ್ರ ಪರಿದಾ ಅವರನ್ನು ಬರ್ಬರವಾಗಿ ಥಳಿಸಿ ಕೊಲ್ಲಲಾಗಿತ್ತು. ಆದರೆ, ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ನಿಷ್ಕ್ರಿಯವಾಗಿದ್ದ ಪೊಲೀಸರ ಮೇಲೆ ಮಹಿಳೆ ಅಸಮಾಧಾನಗೊಂಡಿದ್ದರು ಎಂದು ವರದಿಯಾಗಿದೆ. ಮೇ 13ರಂದು ಇವರಿಬ್ಬರ ವಿವಾಹ ನಡೆಯಬೇಕಿತ್ತು.
ಪ್ರಮುಖ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿ ಹಂಸಾಪುರ ಛಾಕ್ ಬಳಿ ಸೋಮವಾರ ನಡೆದ ಪ್ರತಿಭಟನೆ ವೇಳೆ ಪರಿದಾ ಹತ್ಯೆಯಾದ ದೇವಸ್ಥಾನದ ಬಳಿಯ ಸ್ಥಳದಲ್ಲಿ ಮಹಿಳೆ ವಿಷ ಸೇವಿಸಿದ್ದಾಳೆ. ಆಕೆಯನ್ನು ತಕ್ಷಣವೇ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವಳು ಮೃತಪಟ್ಟಿದ್ದಾಳೆ.
ವ್ಯಾವಹಾರಿಕ ವೈಷಮ್ಯದ ಹಿನ್ನೆಲೆಯಲ್ಲಿ ಪರಿದಾ ಅವರನ್ನು ಹತ್ಯೆ ಮಾಡಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಪ್ರಮುಖ ಆರೋಪಿಯನ್ನು ಇನ್ನಷ್ಟೇ ಬಂಧಿಸಬೇಕಿದೆ.
ಇದನ್ನೂ ಓದಿ: ಬ್ಲೇಡ್ನಿಂದ ಗಂಡನ ಕತ್ತು ಸೀಳಿದ ಪತ್ನಿ.. 'ಪುಷ್ಪ' ಚಿತ್ರದ ಸೀನ್ನಂತೆ ನಡೀತು ಕೃತ್ಯ!