ರೇವಾ(ಮಧ್ಯಪ್ರದೇಶ): ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ, ಯುವತಿಯೊಬ್ಬಳನ್ನು ಮನೆಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ.
ಇಲ್ಲಿನ ಚೋರ್ಹಾಟಾ ಪೊಲೀಸ್ ಠಾಣಾ ಪ್ರದೇಶದಲ್ಲಿ ವಾಸವಾಗಿದ್ದ ಯುವತಿ ನಿತ್ಯ ಅಂಗಡಿವೊಂದರಲ್ಲಿ ಕೆಲಸ ಮಾಡ್ತಿದ್ದಳು. ಹೀಗಾಗಿ ಮನೆಯಿಂದ ಅಂಗಡಿ ಹಾಗೂ ಅಂಗಡಿಯಿಂದ ಮನೆಗೆ ಹೋಗಲು ಆಟೋ ರಿಕ್ಷಾ ಬಳಸಿಕೊಳ್ಳುತ್ತಿದ್ದಳು. ಈ ವೇಳೆ ಪರಿಚಯಸ್ಥ ರಾಕೇಶ್ ತಿವಾರಿ ಆಟೋದಲ್ಲಿ ಆಕೆಯನ್ನ ಕರೆದುಕೊಂಡು ಹೋಗುತ್ತಿದ್ದನು. ಒಂದು ದಿನ ಮದುವೆಯಾಗುವ ಭರವಸೆ ನೀಡಿ, ಗ್ರಾಮದಿಂದ ಬೇರೆ ಕಡೆ ಕರೆದುಕೊಂಡು ಹೋಗಿದ್ದಾನೆ.
ಇದನ್ನೂ ಓದಿ: ತಪ್ಪು ಮಾಡಿದೆ,ಅಪ್ಪಾ ನನ್ನನ್ನು ಕ್ಷಮಿಸಿ; ಆತ್ಮಹತ್ಯೆಗೂ ಮುನ್ನ ವಿಡಿಯೋ ಹರಿಬಿಟ್ಟ ಯುವತಿ!
ರಾಕೇಶ್ ಯುವತಿಯನ್ನ ತನ್ನ ಸಹೋದರಿ ಮನೆಯಲ್ಲಿ ಒತ್ತೆಯಾಳಾಗಿಟ್ಟು ಕೊಂಡಿದ್ದು, ಆಕೆಗೆ ಮಾದಕ ದ್ರವ್ಯ ನೀಡಿ, ಐದು ದಿನಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿದ್ದಾಳೆ. ಅವರಿಂದ ತಪ್ಪಿಸಿಕೊಂಡು ಬಂದ ಯುವತಿ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದ್ದಾಳೆ.
ಈ ವೇಳೆ, ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಈಗಾಗಲೇ ಆರೋಪಿಯ ಬಂಧನ ಮಾಡಿದ್ದಾರೆ.
ಒಂದು ವರ್ಷದಿಂದ ಪ್ರೀತಿ?
ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಎಸ್ಪಿ ಪ್ರತಿಭಾ ಶರ್ಮಾ, ಕಳೆದ ಒಂದು ವರ್ಷದಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಮದುವೆಯಾಗಲು ಸಹ ನಿರ್ಧರಿಸಿದ್ದರು. ಆದರೆ, ಏಕಾಏಕಿಯಾಗಿ ಯುವಕ ಮದುವೆಗೆ ನಿರಾಕರಿಸಿದ್ದು, ಆಕೆಯನ್ನ ಮದುವೆಯಾಗುವುದಾಗಿ ಸುಳ್ಳು ಭರವಸೆಯೊಂದಿಗೆ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.