ಗುಂಟೂರು (ಆಂಧ್ರಪ್ರದೇಶ): ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತಾಡೆಪಲ್ಲಿಯಲ್ಲಿರುವ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಕಚೇರಿ ಬಳಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಎರಡು ದಿನಗಳಿಂದ ಸಿಎಂ ಕಚೇರಿಗೆ ಅಲೆದಾಡಿದರೂ ಪೊಲೀಸರು, ಸಿಎಂ ಭೇಟಿಗೆ ಅವಕಾಶ ನಿರಾಕರಿಸಿದ್ದರಿಂದ ಮನನೊಂದು ಮಹಿಳೆ ಈ ಕೆಲಸ ಮಾಡಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಕಾಕಿನಾಡ ಮೂಲದ ಆರುದ್ರ ಎಂದು ಗುರುತಿಸಲಾಗಿದೆ.
ಬ್ಲೇಡ್‌ನಿಂದ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ತಕ್ಷಣ ಎಚ್ಚೆತ್ತ ಪೊಲೀಸರು ವಿಜಯವಾಡದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ವೈದ್ಯರು ಚಿಕಿತ್ಸೆ ನೀಡಿ ಐದು ಹೊಲಿಗೆಗಳನ್ನು ಹಾಕಿದ್ದಾರೆ.
ಬೆನ್ನುಮೂಳೆಯ ಸಮಸ್ಯೆಯಿಂದ ಬಳಲುತ್ತಿರುವ ಮಗಳ ಶಸ್ತ್ರಚಿಕಿತ್ಸೆಗೆ ತನ್ನ ಆಸ್ತಿಯನ್ನು ಮಾರಲು ಮುಂದಾಗಿದ್ದರು. ಆದರೆ, ಇದನ್ನು ಮಾರಾಟ ಮಾಡದಂತೆ ಕೆಲವರು ತಡೆಯುತ್ತಿದ್ದಾರೆ. ಈ ಕುರಿತು ಸಿಎಂ ಬಳಿಕ ಸಮಸ್ಯೆ ಹೇಳಿಕೊಳ್ಳಲು ಮಹಿಳೆ ಯತ್ನಿಸಿದ್ದರು ಎಂದು ಹೇಳಲಾಗಿದೆ.
ಮಗಳು ಬಾಲ್ಯದಿಂದಲೂ ಗಾಲಿ ಕುರ್ಚಿಗೆ ಸಿಮೀತವಾಗಿದ್ದು, ಇಲ್ಲಿಯವರೆಗೆ 3 ಬಾರಿ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆದರೂ, ಗುಣಮುಖವಾಗದ ಕಾರಣ ಮತ್ತೊಮ್ಮೆ ಆಪರೇಷನ್ ಮಾಡಬೇಕೆಂದು ವೈದ್ಯರು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಸಹೋದರನ ಪುತ್ರ ಕಣ್ಮರೆ: ಊಟ ಬಿಟ್ಟ ಶಾಸಕ ರೇಣುಕಾಚಾರ್ಯಗೆ ಪುತ್ರಿಯಿಂದ ಕೈತುತ್ತು