ನವದೆಹಲಿ: ಮನೆಯೊಳಗಿದ್ದ ತಾಯಿ-ಮಗಳ ಮೇಲೆ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾದ ಘಟನೆ ಈಶಾನ್ಯ ದೆಹಲಿಯಲ್ಲಿ ತಡರಾತ್ರಿ ನಡೆದಿದೆ. ಘಟನೆಯಲ್ಲಿ ತಾಯಿ ಸ್ಥಳದಲ್ಲೇ ಮೃತಪಟ್ಟರೇ ಅವರ ಮಗಳು ಗಂಭೀರವಾಗಿ ಗಾಯಗೊಂಡಿದ್ದಾಳೆ.
ಘಟನೆ ಕುರಿತು ಮಾತನಾಡಿರುವ ದೆಹಲಿ ಪೊಲೀಸರು, ಶಮಾ ಖಾನ್ ಸ್ಥಳದಲ್ಲೀ ಮೃತಪಟ್ಟಿದ್ದಾರೆ. ಅವರ ಮಗಳು ಮೆಹಕ್ಳನ್ನು ಸ್ವಾಮಿ ದಯಾನಂದ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಅಲ್ಲಿಂದ ಆಕೆಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ ಕಾರಣ ಸಫ್ದರ್ಜಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. ಇಲ್ಲಿನ ಮನ್ಸರೋವರ್ ಪಾರ್ಕ್ ಅಪಾರ್ಟ್ಮೆಂಟ್ನ 4ನೇ ಮಹಡಿಯಲ್ಲಿ ಶಮಾ ಖಾನ್ ತನ್ನ ಮೂವರು ಮಕ್ಕಳೊಂದಿಗೆ ನೆಲೆಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶಮಾ ತನ್ನ ಪತಿಯಿಂದ ದೂರಾಗಿ, ಮಕ್ಕಳೊಂದಿಗೆ ನೆಲೆಸಿದ್ದರು. ಸೋಮವಾರ ರಾತ್ರಿ 7:30ಕ್ಕೆ ಮನೆಗೆ ಇಂಟರ್ನೆಟ್ ಸಂಪರ್ಕ ನೀಡಲು ವ್ಯಕ್ತಿವೋರ್ವ ಬಂದಿದ್ದ ವೇಳೆ ಇಬ್ಬರು ದುಷ್ಕರ್ಮಿಗಳು ಬೈಕ್ನಲ್ಲಿ ಬಂದು ಏಕಾಏಕಿ ಗುಂಡು ಹಾರಿಸಿದ್ದಾರೆ. ಮೊದಲು ಮೆಹಕ್ ಮೇಲೆ ದಾಳಿಗೆ ಯತ್ನಿಸಿದಾಗ ಆಕೆಯ ತಾಯಿ ಶಮಾ ಖಾನ್ ಅಡ್ಡಬಂದಿದ್ದಾರೆ. ಈ ವೇಳೆ ತಾಯಿ ಶಮಾ ಖಾನ್ಗೆ ಗುಂಡೇಟು ತಗುಲಿ ಸಾವನ್ನಪ್ಪಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.