ಕೊರ್ಬಾ(ಛತ್ತೀಸ್‌ಗಢ): 'ರಾಂಗ್ ನಂಬರ್' ವಿಚಾರವಾಗಿ ಗಂಡನ ಜೊತೆ ಜಗಳವಾಡಿದ ಪತ್ನಿ ಬಳಿಕ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೊರ್ಬಾದ ಮಾಣಿಕ್‌ಪುರ್ ಚೌಕಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಏನಿದು ಪ್ರಕರಣ?: ಮಾಣಿಕ್‌ಪುರ್ ಚೌಕಿ ಪ್ರದೇಶದ ಸೂರಜ್ ಮಹಂತ್ ಹಾಗೂ ಪೂಜಾ ಕಳೆದ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದರು. ಸೋಮವಾರ ಪತಿ ಸೂರಜ್ ಮಹಂತ್ ಅವರ ಮೊಬೈಲ್ಗೆ ಹುಡುಗಿಯೊಬ್ಬಳು ಕರೆ ಮಾಡಿದ್ದಾಳೆ. ಈ ವಿಚಾರವಾಗಿ ದಂಪತಿ ನಡುವೆ ತೀವ್ರ ಜಗಳವಾಗಿದೆ. ಪತ್ನಿ ಪೂಜಾ ತನ್ನ ಪತಿ ಆ ಹುಡುಗಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿದ್ದಾರೆ. ಬಳಿಕ ವಾದ ವಿಕೋಪಕ್ಕೆ ತಿರುಗಿ ಪೂಜಾ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ.
ಪತ್ನಿಯನ್ನು ರಕ್ಷಿಸುವ ಭರದಲ್ಲಿ ಮಹಂತ್ ಕೈಗೂ ಸುಟ್ಟ ಗಾಯವಾಗಿದೆ. ಬಳಿಕ ಅವರನ್ನು ಕೊರ್ಬಾದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆಯ ಸ್ಥಿತಿ ಚಿಂತಾಜನಕವಾಗಿದ್ದು, ಬಿಲಾಸ್‌ಪುರಕ್ಕೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ಇದು ರಾಂಗ್ ನಂಬರ್ ಎಂದು ನಾನು ಪೂಜಾಗೆ ಹೇಳಿದ್ದೆ. ಆದರೆ ಆಕೆ ಕೇಳಲು ಸಿದ್ಧಳಿರಲಿಲ್ಲ. ಬಳಿಕ ಆಕೆ ಬೆಂಕಿ ಹಚ್ಚಿಕೊಂಡಿದ್ದಾಳೆ ಎಂದು ಪತಿ ಸೂರಜ್ ಮಹಂತ್ ಹೇಳಿದ್ದಾರೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಲಾರಿ ಡ್ರೈವರ್ ಚೆಲ್ಲಾಟ.. ಟೋಲ್ ಸಿಬ್ಬಂದಿಗೆ ಪ್ರಾಣ ಸಂಕಟ..!