ಜೈಪುರ(ರಾಜಸ್ಥಾನ): ಜೈಪುರದಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯೋರ್ವಳ ಮನೆಗೆ ನುಗ್ಗಿರುವ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಆಗಸ್ಟ್ 10ರಂದು ಈ ಘಟನೆ ನಡೆದಿದ್ದು, ಜೀವನ್ಮರಣದ ನಡುವೆ ಹೋರಾಟ ನಡೆಸಿದ ಸಂತ್ರಸ್ತೆ ಆಗಸ್ಟ್ 16ರಂದು ಸಾವನ್ನಪ್ಪಿದ್ದಾಳೆ.
ಆರು ಜನರು ದಿಢೀರ್ ಮಹಿಳೆಯ ಮನೆಗೆ ನುಗ್ಗಿದ್ದು, ರಕ್ಷಣೆಗೋಸ್ಕರ ನೆರೆ ಮನೆಗೆ ಮಹಿಳೆ ಓಡಿ ಹೋಗಿದ್ದಾಳೆ. ದುಷ್ಕರ್ಮಿಗಳು ನೆರೆ ಮನೆಯವರಿಗೂ ಕೊಲೆ ಬೆದರಿಕೆ ಹಾಕಿದ್ದು, ಆಕೆಯ ಪ್ರಾಣ ರಕ್ಷಣೆ ಮಾಡಲು ಯಾರೊಬ್ಬರೂ ಮುಂದೆ ಬಂದಿಲ್ಲ.
ರಕ್ಷಣೆ ಪಡೆದುಕೊಂಡಿದ್ದ ಮನೆಯಿಂದ ಮಹಿಳೆ ಹೊರಬರುತ್ತಿದ್ದಂತೆ ಆಕೆಯ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಜನರು ಮೂಕಪ್ರೇಕ್ಷಕರಾಗಿ ನೋಡುತ್ತಾ ನಿಂತಿದ್ದು, ತೀವ್ರವಾಗಿ ಗಾಯಗೊಂಡ ಮಹಿಳೆಯನ್ನು ಸವಾಯಿ ಮಾನ್ಸಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಾರಗಳ ಕಾಲ ಜೀವನ್ಮರಣದ ಮಧ್ಯೆ ಹೋರಾಟ ನಡೆಸಿದ ಆಕೆ, ಮಂಗಳವಾರ ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ, ಸಂತ್ರಸ್ತ ಮಹಿಳೆ ನೆರೆಹೊರೆ ವಾಸಿಸುತ್ತಿದ್ದವರಿಗೆ ಸಾಲ ನೀಡಿದ್ದಳಂತೆ. ಹಣ ವಾಪಸ್ ಕೇಳಿದಾಗ ಜಗಳವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಹಿಳೆ ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ದೌರ್ಜನ್ಯದ ಪ್ರಕರಣ ದಾಖಲು ಮಾಡಿದ್ದಳು. ಇದರ ಬೆನ್ನಲ್ಲೇ ಆಕೆಗೆ ಬೆಂಕಿ ಹಚ್ಚಿ ಕೊಂದಿದ್ದಾರೆ. ಮಹಿಳೆಗೆ ಬೆಂಕಿ ಹೊತ್ತಿಕೊಂಡು ನರಳಾಟ ನಡೆಸಿರುವ ವಿದ್ರಾವಕ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಇದನ್ನೂ ಓದಿ: ಬಿಹಾರದ ಶೇ. 72ರಷ್ಟು ಸಚಿವರಿಗೆ ಕ್ರಿಮಿನಲ್ ಹಿನ್ನೆಲೆ, 17 ಮಂತ್ರಿಗಳ ವಿರುದ್ಧ ಗಂಭೀರ ಪ್ರಕರಣ
ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಸ್ಪಿ ಶಿವಕುಮಾರ್ ಮಾತನಾಡಿ, "ಸಂತ್ರಸ್ತ ಮಹಿಳೆ ಮತ್ತು ಆಕೆಯ ಅಕ್ಕಪಕ್ಕದಲ್ಲಿ ವಾಸಿಸುತ್ತಿದ್ದ ಜನರ ನಡುವೆ ಬಹಳ ದಿನಗಳಿಂದ ಹಣದ ವಿಚಾರವಾಗಿ ಜಗಳ ನಡೆಯುತ್ತಿತ್ತು. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದವು. ಅದರ ವಿಚಾರಣೆ ನಡೆಸುತ್ತಿದ್ದ ಬೆನ್ನಲ್ಲೇ ಇಂತಹ ಘಟನೆ ನಡೆದಿದೆ" ಎಂದಿದ್ದಾರೆ.