ಪಾಣಿಪತ್(ಹರಿಯಾಣ): ಪುರುಷರು ಮನೆಯಿಂದ ಹೊರಗಡೆ ಕೆಲಸ ಮಾಡಿದ್ರೆ, ಮಹಿಳೆಯರು ಮನೆಯೊಳಗೆ ಮಾತ್ರ ಕೆಲಸ ಮಾಡುವ ಕಾಲವೊಂದಿತ್ತು. ಆದರೆ, ಇದೀಗ ಎಲ್ಲವೂ ಬದಲಾಗಿದೆ. ಪುರುಷರಿಗೆ ಸಮನಾಗಿ ನಿಂತುಕೊಂಡು ಮಹಿಳೆ ಕೂಡ ಎಲ್ಲ ಕ್ಷೇತ್ರಗಳಲ್ಲೂ ದುಡಿಯುತ್ತಿದ್ದಾಳೆ. ಸದ್ಯ ಇದೀಗ ನಾವು ಹೇಳಲು ಹೊರಟಿರುವ ಕಥೆಯಲ್ಲಿಯೂ ಕೂಡ ಇದೇ ರೀತಿಯಲ್ಲಿದೆ.
ಮುಸ್ಲಿಂ ಸಮುದಾಯದ ಮಹಿಳೆಯರು ಕೇವಲ ಖುರ್ಖಾ ಹಾಕಿಕೊಂಡು ಜೀವನ ನಡೆಸಬೇಕು ಎಂಬ ಮಾತು ಈಗಲೂ ಕೇಳಿ ಬರುತ್ತಿದೆ. ಆದರೆ, ಇದಕ್ಕೆ ತದ್ವಿರುದ್ಧವಾಗಿರುವ ಮಹಿಳೆಯೋರ್ವಳು ಸ್ವಾವಲಂಬಿ ಜೀವನ ನಡೆಸುತ್ತಿದ್ದು, ದಿವ್ಯಾಂಗ ಗಂಡ ಹಾಗೂ ಐದು ವರ್ಷದ ಮಗುವಿನ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದಾಳೆ. ದಿವ್ಯಾಂಗ ಪತಿಯ ಪೋಷಣೆ ಜೊತೆಗೆ ಜಾನ್ ಎಂಬ ಮಹಿಳೆಯೋರ್ವಳು ಹಾಲು ಮಾರಾಟದಂತಹ ಉದ್ಯಮ ಮಾಡ್ತಿದ್ದು, ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಿದ್ದಾಳೆ. ಪ್ರತಿದಿನ ಬೆಳಗ್ಗೆ ದ್ವಿಚಕ್ರವಾಹನದಲ್ಲಿ ಕ್ಯಾನ್ನಲ್ಲಿ ಹಾಲು ಮಾರಾಟ ಮಾಡಲು ಹೋಗುವ ಮಹಿಳೆ ಜಾನ್ 90 ಲೀಟರ್ ಹಾಲು ವಿತರಣೆ ಮಾಡುತ್ತಾಳೆ.
ಇದನ್ನೂ ಓದಿ: ಸಿಎಂ ಠಾಕ್ರೆ ಮನೆ ಮುಂದೆ ಹನುಮಾನ್ ಚಾಲೀಸಾ ಪಠಿಸುವ ಸವಾಲು: ಸಂಸದೆ, ಪತಿ ಬಂಧನ
ಮನೆಯಲ್ಲಿ 60ರಿಂದ 70 ಎಮ್ಮೆ ಸಾಕಿರುವ ಮಹಿಳೆ ನಿತ್ಯ 100 ಲೀಟರ್ ಹಾಲು ಮಾರಾಟ ಮಾಡ್ತಿದ್ದು, ಒಂದರಿಂದ ಒಂದೂವರೆ ಲಕ್ಷ ರೂಪಾಯಿ ಗಳಿಕೆ ಮಾಡ್ತಿದ್ದಾಳೆ. ಬೆಳಗ್ಗೆ ಹಾಲು ಮಾರಾಟ ಮಾಡಿದ ಬಳಿಕ ಎಮ್ಮೆಗಳನ್ನ ಊರ ಹೊರಗಿನ ಖಾಲಿ ಪ್ರದೇಶದಲ್ಲಿ ಮೇಯಿಸುವ ಮಹಿಳೆ ಸಂಜೆ ಕೂಡ ಅವುಗಳಿಗೆ ನೀರು, ಮೇವು ಹಾಕುವ ಕೆಲಸ ಮಾಡುತ್ತಾಳೆ. ಈ ಮೊದಲು ಈ ಕೆಲಸವನ್ನು ಜಾನ್ ಪತಿ ಮಾಡ್ತಿದ್ದನು. ಆದರೆ, ಕಳೆದ ಕೆಲ ತಿಂಗಳ ಹಿಂದೆ ಅಪಘಾತದಲ್ಲಿ ಅಂಗವಿಕನಾದ ಕಾರಣ ಜಾನ್ ಇದರ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದು, ಎಲ್ಲ ಕಷ್ಟ ಎದುರಿಸಿ, ಇದೀಗ ಸಂಪೂರ್ಣ ವ್ಯವಹಾರ ಖುದ್ದಾಗಿ ನಡೆಸುತ್ತಿದ್ದಾಳೆ.