ಕಟಕ್: ಒಡಿಶಾದ ಕಟಕ್ ಜಿಲ್ಲೆಯ ಭಾಬ್‌ಚಂದಪುರ ಗ್ರಾಮದಲ್ಲಿ 19 ವರ್ಷಗಳಿಂದ ಕಾಣೆಯಾಗಿದ್ದ ಊರ್ಮಿಳಾ ಪರಿದಾ ಎಂಬ ಮಹಿಳೆ ತನ್ನ ಕುಟುಂಬವನ್ನು ಮತ್ತೆ ಸೇರಿರುವ ಹೃದಯಸ್ಪರ್ಶಿ ಸಂದರ್ಭ ಕಂಡು ಬಂದಿದೆ. ಊರ್ಮಿಳಾ 2004ರಲ್ಲಿ ಅಸ್ವಸ್ಥ ಮನಸ್ಸಿನಿಂದ ತನ್ನ ಮನೆ ತೊರೆದಿದ್ದಳು ಮತ್ತು ಹೀಗಾಗಿ ಅವಳ ಕುಟುಂಬವು ಅವಳನ್ನು ಹುಡುಕಲು ಪ್ರಯತ್ನಿಸಿದರೂ ಅವರಿಗೆ ಅವಳ ಯಾವುದೇ ಕುರುಹು ಸಿಕ್ಕಿರಲಿಲ್ಲ. ಇತ್ತೀಚೆಗೆ, ಕುರುಂಟಿ ಗ್ರಾಮದ ಶ್ರೀ ಮಂದಿರ ಸೇವಾಶ್ರಮದ ಸದಸ್ಯರು ಊರ್ಮಿಳಾ ಅವರನ್ನು ಎಟಿಎಂ ಬಳಿ ಕಂಡು ತಮ್ಮ ಸೇವಾಶ್ರಮದಲ್ಲಿ ಆರೈಕೆ ಮತ್ತು ಚಿಕಿತ್ಸೆ ನೀಡಿದ್ದರು.
ಸ್ವಲ್ಪ ಸಮಯದ ನಂತರ ಊರ್ಮಿಳಾ ತಮ್ಮ ಸ್ಮರಣೆ ಮರಳಿ ಪಡೆಯಲು ಪ್ರಾರಂಭಿಸಿದ್ದಾರೆ ಮತ್ತು ತಮ್ಮ ಹೆಸರನ್ನು ಮತ್ತು ತಾಯಿಯ ಹೆಸರನ್ನು ನೆನಪಿಸಿಕೊಂಡಿದ್ದಾರೆ. ಸೇವಾಶ್ರಮದ ಸದಸ್ಯರು ಆಕೆ ಮಾತನಾಡುವ ವಿಡಿಯೋವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಅಲ್ಲದೇ, ಮಹಿಳೆಯ ಕುಟುಂಬವನ್ನು ಪತ್ತೆ ಹಚ್ಚುವ ಪ್ರಯತ್ನ ಮಾಡಿದ್ದರು.
ಇದಾದ ಕೆಲವು ದಿನಗಳ ನಂತರ ಊರ್ಮಿಳಾ ಅವರ ಮಗಳು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ನೋಡಿದ್ದಾರೆ. ತದನಂತರ ಅಲ್ಲಿ ಅವರ ತಾಯಿಯನ್ನು ಗುರುತಿಸಿದ್ದಾರೆ. ಇದಾದ ನಂತರ ಸಂಸ್ಥೆಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಸೋಮವಾರ, ಇಡೀ ಕುಟುಂಬ ಶ್ರೀ ಮಂದಿರ ಸೇವಾಶ್ರಮ ತಲುಪಿದ್ದಾರೆ. ಅಲ್ಲಿ ಸಂತೋಷದಾಯಕ ಪುನರ್ಮಿಲನ ಆಯೋಜಿಸಲಾಯಿತು. ಊರ್ಮಿಳಾಳ ಪತಿ ಅವಳ ಹಣೆಯ ಮೇಲೆ ಸಿಂಧೂರ ಇಟ್ಟು ಮಾಲೆ ಹಾಕಿ ಮತ್ತೆ ಒಂದಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.
ಕುಟುಂಬಸ್ಥರನ್ನು ತಲುಪಿದ ಊರ್ಮಿಳಾ: ಊರ್ಮಿಳಾ ಅವರ ಮಗಳು ಮಂದಾಕಿನಿ ತನ್ನ ತಾಯಿಯನ್ನು ಕಂಡು ಸಂತಸ ವ್ಯಕ್ತಪಡಿಸಿದ್ದಾರೆ. ತಾಯಿ ಊರ್ಮಿಳಾ ಮಾನಸಿಕವಾಗಿ ಅಸ್ಥಿರವಾಗಿದ್ದಾಗ ಮನೆ ತೊರೆದಿದ್ದರು ಮತ್ತು ಮತ್ತೆ ಹಿಂತಿರುಗುವ ದಾರಿಯನ್ನು ಮರೆತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ. ಅವರು ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ತಾಯಿಯ ಇರುವಿಕೆ ಕಂಡು ಹಿಡಿದಿದ್ದಾರೆ ಮತ್ತು ತಾಯಿಯನ್ನು ಕರೆದುಕೊಂಡು ಬರುವುದಕ್ಕೆ ತನ್ನ ಸಹೋದರ ಮತ್ತು ತಂದೆಯನ್ನು ಪ್ರೋತ್ಸಾಹಿಸಿದ್ದಾರೆ. ಅಂತಿಮವಾಗಿ, ಅವರು ಊರ್ಮಿಳಾಳನ್ನು ಪತ್ತೆಹಚ್ಚಲು ಮತ್ತು ತಮ್ಮ ಕುಟುಂಬಸ್ಥರೊಂದಿಗೆ ಮತ್ತೆ ಒಂದಾಗಲು ಸಾಧ್ಯವಾಗಿದೆ.
ಊರ್ಮಿಳಾ ಅವರ ಪತಿ ಬಸಂತ್ ಪರಿದಾ ಅವರು ಮಾತನಾಡಿದ್ದು, ಪತಿ ತಮ್ಮ ಸೋದರಳಿಯನನ್ನು ಭೇಟಿ ಮಾಡುವ ಉದ್ದೇಶದಿಂದ ಮನೆಯಿಂದ ಹೊರಟು ಹೋಗಿದ್ದರು. ಆದರೆ, ಅವರು ದಾರಿ ತಪ್ಪಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ನಂತರ ನಾವು ಅವರನ್ನು ಹುಡುಕಲು ಸಾಕಷ್ಟು ಪ್ರಯತ್ನವನ್ನು ಮಾಡಿದೆವು. ಕೊನೆಗೆ ಮೊಬೈಲ್ ವಿಡಿಯೋದಲ್ಲಿ ಅವರ ಮುಖವನ್ನು ನೋಡುವವರೆಗೂ ಹುಡುಕಲು ಸಾಧ್ಯವಾಗಲಿಲ್ಲ. ನಂತರ ನಾವು ಶ್ರೀ ಮಂದಿರ ಸೇವಾಶ್ರಮಕ್ಕೆ ಭೇಟಿ ನೀಡಿದೆವು. ಅಲ್ಲಿ ಊರ್ಮಿಳಾರನ್ನು ಕಂಡು ಸಂತೋಷವಾಯಿತು ಎಂದಿದ್ದಾರೆ.
ನಿರಂತರ ಚಿಕಿತ್ಸೆ ಮತ್ತು ಆರೈಕೆ : ಶ್ರೀ ಮಂದಿರ ಸೇವಾಶ್ರಮ ಮತ್ತು ಜೈ ಜಗನ್ನಾಥ ಬಳಗದ ಸಂಸ್ಥಾಪಕ ಶಿವಶಂಕರ್ ದಾಸ್ ಅವರು ಕೆಲವು ವರ್ಷಗಳ ಹಿಂದೆ ಆಶ್ರಮ ಸ್ಥಾಪಿಸಿದ್ದರು. ಎಟಿಎಂ ಬಳಿ ಮಹಿಳೆಯೊಬ್ಬರು ಸಂಕಷ್ಟದ ಜೀವನ ನಡೆಸುತ್ತಿರುವ ಬಗ್ಗೆ ತಿಗಿರಿಯಾ ಬ್ಲಾಕ್ ಡೆವಲಪ್‌ಮೆಂಟ್ ಅಧಿಕಾರಿ (ಬಿಡಿಒ) ಅವರಿಂದ ಅವರಿಗೆ ಕರೆ ಬಂದಿತ್ತು.
ಅವರು ತಕ್ಷಣವೇ ಅವಳನ್ನು ರಕ್ಷಿಸಿದರು ಮತ್ತು ಅವಳು ತನ್ನ ಪ್ರಜ್ಞೆಯನ್ನು ಮರಳಿ ಪಡೆಯುವವರೆಗೆ ಮತ್ತು ಅವಳ ಕುಟುಂಬದೊಂದಿಗೆ ಮತ್ತೆ ಸೇರುವವರೆಗೂ ನಿರಂತರ ಚಿಕಿತ್ಸೆ ಮತ್ತು ಆರೈಕೆಯನ್ನು ಒದಗಿಸಿದರು. ಊರ್ಮಿಳಾ ಮನೆಬಿಟ್ಟು ಹೋದಾಗ, ಅವಳ ಮಗನಿಗೆ ಕೇವಲ ಆರು ವರ್ಷ. ಮತ್ತು ಅವಳ ಹಿರಿಯ ಮಗಳು ಈಗಾಗಲೇ ಮದುವೆಯಾಗಿದ್ದರು. ಈಗ, ಅವರು ತಮ್ಮ ಕುಟುಂಬಕ್ಕೆ ಮರಳಿ ಹಿಂದಿರುಗಿದ್ದಾರೆ ಮತ್ತು ಕುಟುಂಬವು ತಮ್ಮ ತಾಯಿಯನ್ನು ಮರಳಿ ಪಡೆಯಲು ಸಾಕ್ಷಿಯಾಗಿರುವುದು ಅಪರೂಪದ ಮತ್ತು ಹೃತ್ಪೂರ್ವಕ ದೃಶ್ಯವೆಂದು ದಾಸ್ ಬಣ್ಣಿಸಿದ್ದಾರೆ.
ಇದನ್ನೂ ಓದಿ: ಕೆಲಸದಿಂದ ಹಳಿ ತಪ್ಪಿದ 25 ವರ್ಷಗಳ ಬದುಕು: ಯೋಧರ ಸಹಾಯದಿಂದ ಮರಳಿ ಗೂಡು ಸೇರಿದ ವೃದ್ಧ!