ಅಲಿಘರ್ (ಉ.ಪ್ರ): ಜಗತ್ತಿನಲ್ಲಿರುವ ಮಾನವರಾದ ನಾವೆಲ್ಲ ಇತರೆ ಪ್ರಾಣಿ-ಪಕ್ಷಿಗಳಿಗಿಂತ ಭಿನ್ನ. ಆದರೆ, ಇಲ್ಲೋರ್ವ ಮಹಿಳೆ ಇನ್ನೂ ವಿಭಿನ್ನ ಎನ್ನುವಂತ ವಿಚಿತ್ರವಾದ ಮಗುವಿಗೆ ಜನ್ಮ ನೀಡಿದ್ದಾಳೆ.
ಠಾಣಾ ಟಪ್ಪಲ್ ಪ್ರದೇಶದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಮಾ ಎಂಬ ಮಹಿಳೆ ಎರಡು ತಲೆ, ನಾಲ್ಕು ಕೈಗಳು ಮತ್ತು ಎರಡು ಕಾಲುಗಳನ್ನು ಹೊಂದಿರುವ ವಿಚಿತ್ರ ರೀತಿಯ ಮಗುವಿಗೆ ಜನ್ಮ ನೀಡಿದ್ದಾಳೆ. ಜನನದ ನಂತರ ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
ಮಗುವನ್ನು ನೋಡಿದ ಎಲ್ಲರೂ ಧಿಗ್ಬ್ರಮೆಗೆ ಒಳಗಾಗಿದ್ದಾರೆ. ಈ ಮಗುವಿನ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಎಲ್ಲಾ ಕಡೆಯಿಂದ ಜನರು ಬಂದು ಮಗುವನ್ನು ನೋಡುತ್ತಿದ್ದಾರೆ.
ಈ ಬಗ್ಗೆ ಸ್ಟಾಫ್ ನರ್ಸ್ ಪ್ರೀತಿ ಸಿಂಗ್ ಪ್ರತಿಕ್ರಿಯೆ ನೀಡಿದ್ದು, ಅವಳಿ ಮಗು ಆಗುತ್ತದೆ ಎಂದು ನಾವು ತಿಳಿಸಿದ್ದೆವು. ಆದರೆ, ಮಗುವಿನ ಜನನದ ಸಮಯದಲ್ಲಿ ಮಗುವಿನ ತಲೆಯನ್ನು ಹೊರ ತೆಗೆದ ನಂತರ ಉಳಿದ ಅಂಗಾಂಗಗಳನ್ನು ಬಹಳ ಕಷ್ಟದಿಂದ ತೆಗೆಯಲಾಯಿತು. ಈಗ ಮಗು ಮತ್ತು ಮಗುವಿನ ತಾಯಿ ಇಬ್ಬರೂ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದಿದ್ದಾರೆ.
ಟಪ್ಪಲ್ ಸಮುದಾಯ ಆರೋಗ್ಯ ಕೇಂದ್ರದ ಅಧೀಕ್ಷಕ ಡಾ.ಬ್ರಿಜೇಶ್ ಕುಮಾರ್ ಮಾತನಾಡಿ, ಟಪ್ಪಲ್ ನಿವಾಸಿ ಗರ್ಭಿಣಿ ಶಮಾ ಅವರು ರಾತ್ರಿ ಸುಮಾರು 12 ಗಂಟೆಗೆ ಬಂದು ಆಸ್ಪತ್ರೆಗೆ ದಾಖಲಾದರು. ಮಗು ಮಧ್ಯಾಹ್ನ 2.10ಕ್ಕೆ ಜನಿಸಿತು. ಮಗುವಿಗೆ ಎರಡು ತಲೆಗಳಿವೆ. ಈ ಬಗ್ಗೆ ಮಾಹಿತಿಯನ್ನು ಮೇಲಿನ ಅಧಿಕಾರಿಗಳಿಗೆ ನೀಡಲಾಗಿದೆ. ಜೊತೆಗೆ ಮಗುವನ್ನು ಉನ್ನತ ಕೇಂದ್ರಕ್ಕೆ ದಾಖಲಿಸಲು ಉಲ್ಲೇಖಿಸಲಾಗುತ್ತಿದ್ದು, ಅಲಿಘರ್ನಲ್ಲಿ ಮಗುವಿಗೆ ಯಾವ ಶಸ್ತ್ರಚಿಕಿತ್ಸೆ ಲಭ್ಯವಿರುತ್ತದೆ ಅಥವಾ ಯಾವ ಶಸ್ತ್ರಚಿಕಿತ್ಸೆ ಮಾಡಬಹುದೆಂಬ ಅಭಿಪ್ರಾಯಕ್ಕಾಗಿ ವರದಿ ಕಳುಹಿಸಲಾಗಿದೆ ಎಂದಿದ್ದಾರೆ.
ಗರ್ಭಧಾರಣೆಯ ಮೊದಲ ಅಲ್ಟ್ರಾಸೌಂಡ್ ಟೆಸ್ಟಿಂಗ್ ಮಾಡಲಾಗುತ್ತದೆ. ಈ ಮುಖಾಂತರ ಮಕ್ಕಳ ಆರೋಗ್ಯ ಬೆಳವಣಿಗೆಗಳನ್ನು ಕಂಡುಹಿಡಿಯಲಾಗುತ್ತದೆ. ಆಗ ಏನಾದರೂ ಮಕ್ಕಳಲ್ಲಿ ತೊಂದರೆ ಕಂಡುಬಂದರೆ ಅವನ್ನು ತೆಗೆದುಹಾಕುವ ಕೆಲಸ ಮಾಡುತ್ತೇವೆ. ಆದರೆ, ಹಳ್ಳಿ ಪ್ರದೇಶಗಳಲ್ಲಿ ಜನರು ವಿದ್ಯಾವಂತರಾಗಿದ್ದರಿಂದ ಅವರಿಗೆ ಹೆಚ್ಚಿನ ಅರಿವಿಲ್ಲ. ನಾವು ಸಲಹೆ ನೀಡಿದರೂ ಜನರು ಅದನ್ನು ಪಾಲಿಸುವುದಿಲ್ಲ ಎಂದು ಹೇಳಿದ್ದಾರೆ.