ಗೋರಖ್‌ಪುರ: ಗಂಡನಿಗೆ ಪತ್ರದಲ್ಲಿ ವಿಚ್ಛೇದನ ನೀಡಿ ತನ್ನ ಲವರ್ ಜೊತೆ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬಳು ಮದುವೆಯಾಗಿರುವ ವಿಚಿತ್ರ ಘಟನೆ ಜಿಲ್ಲೆಯ ಬಾದಲ್ಗಂಜ್ನಲ್ಲಿ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ...
ಬಾದಲ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿ ನರ್ಹಾರ್ಪುರ ಗ್ರಾಮದ ನಿವಾಸಿ ಪರಮಹನ್ಸ್ ಅವರ ಪುತ್ರಿ ಸರಿತಾ ಎರಡು ವರ್ಷಗಳ ಹಿಂದೆ ಪಿಧ್ನಿ ಗ್ರಾಮದ ನಿವಾಸಿ ಶ್ರೀಕಾಂತರ ಪುತ್ರ ರಾಮ್ ಭುವಾಲ್ರನ್ನು ಮದುವೆಯಾಗಿದ್ದರು. ಸರಿತಾ ಮದುವೆಗೂ ಮುನ್ನ ಕಾರ್ವಾಲ್ ಮಂಜಗವಾನ್ ನಿವಾಸಿ ಛೋಟೆ ಲಾಲ್ರ ಮಗ ರಂಜೀತ್ನೊಂದಿಗೆ ಪ್ರೇಮ ಸಂಬಂಧ ನಡೆಯುತ್ತಿತ್ತು. ಎರಡೂ ಕುಟುಂಬಗಳಿಗೆ ಪ್ರೇಮ ಸಂಬಂಧದ ಬಗ್ಗೆ ತಿಳಿದಿತ್ತು. ಮದುವೆಯ ಬಗ್ಗೆಯೂ ಮಾತುಕತೆ ನಡೆದಿತ್ತು. ಆದರೆ ಕೆಲವು ಕಾರಣಗಳಿಂದ ಮದುವೆ ನಡೆಯಲು ಸಾಧ್ಯವಾಗಲಿಲ್ಲ.
ಕುಟುಂಬಸ್ಥರು ಸರಿತಾಳನ್ನು ರಾಮ್ ಭುವಾಲ್ ಜೊತೆ ಮದುವೆ ಮಾಡಿಸಿದರು. ಸರಿತಾ ಮದುವೆಯ ನಂತರ ತನ್ನ ಗಂಡನ ಮನೆಗೆ ಹೋದರು. ಆದರೆ ಆಕೆ ತನ್ನ ಪ್ರೇಮಿ ಜೊತೆಗಿದ್ದ ಸಂಪರ್ಕ ಮುರಿಯಲು ಸಾಧ್ಯವಾಗಲಿಲ್ಲ. ಇಬ್ಬರು ಪರಸ್ಪರ ಭೇಟಿಯಾಗುತ್ತಲೇ ಇದ್ದರು. ಈ ಬಗ್ಗೆ ಕುಟುಂಬಕ್ಕೆ ತಿಳಿದಾಗ ವೈಮನಸ್ಸುಗಳು ಹೆಚ್ಚಾಗತೊಡಗಿತು. ಬಳಿಕ ಸರಿತಾ ತನ್ನ ತಾಯಿಯ ಮನೆಗೆ ಬಂದು ಗಂಡನ ಮನೆಗೆ ಹೋಗದಿರಲು ಮತ್ತು ತನ್ನ ಪ್ರೇಮಿಯೊಂದಿಗೆ ಮದುವೆ ಮಾಡಿಕೊಳ್ಳಲು ನಿರ್ಧರಿಸಿದಳು. ಸರಿತಾಳನ್ನು ತನ್ನ ಮನೆಗೆ ಕರೆದುಕೊಂಡು ಹೋಗಲು ಪ್ರೇಮಿ ಕೂಡ ಸಿದ್ಧನಾಗಿದ್ದನು.
ಈ ವಿಚಿತ್ರ ಪ್ರಕರಣ ಪೊಲೀಸ್ ಠಾಣೆ ಮೆಟ್ಟೇರಿತು. ಸರಿತಾ ಮತ್ತು ಅವಳ ಪ್ರೇಮಿ ರಂಜಿತ್ ಸೇರಿದಂತೆ ಠಾಣೆಗೆ ಮೂರು ಕುಟುಂಬಗಳ ಸದಸ್ಯರು ಆಗಮಿಸಿದ್ದರು. ಸುದೀರ್ಘ ಮಾತುಕತೆ ಮತ್ತು ಚರ್ಚೆಯ ಬಳಿಕ ಮೂರು ಕಡೆಯವರು ಒಂದು ನಿರ್ಧಾರಕ್ಕೆ ಬಂದರು.
ಮೂರು ಕುಟುಂಬಸ್ಥರಿಂದ ಒಪ್ಪಂದದ ಪತ್ರವನ್ನು ಬರೆಸಿಕೊಂಡರು. ಇದರ ಅಡಿಯಲ್ಲಿ ಸರಿತಾ ಮತ್ತು ಆಕೆಯ ಪತಿ ಭುವಾಲ್ನಿಂದ ವಿಚ್ಛೇದನ ಪಡೆದರು. ನಂತರ ಪೊಲೀಸ್ ಠಾಣೆಯಲ್ಲಿ ನಿರ್ಮಿಸಲಾದ ಭಗವಾನ್ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಎರಡೂ ಕಡೆಯ ಸಂಬಂಧಿಕರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಸರಿತಾ-ರಂಜಿತ್ ವಿವಾಹ ನೆರವೇರಿತು.
ಈ ಸಮಯದಲ್ಲಿ ಸಂತೋಷದ ವಾತಾವರಣದಲ್ಲಿ ಸ್ವಲ್ಪ ದುಃಖವೂ ಕೂಡಿತ್ತು. ಪತಿ ರಾಮ್ ಭುವಾಲ್ ಅವರ ಮುಖದಲ್ಲಿ ಹೆಂಡತಿಯಿಂದ ಬೇರ್ಪಟ್ಟ ನೋವನ್ನು ಕಾಣಬಹುದಾಗಿತ್ತು. ಅದೇ ಸಮಯದಲ್ಲಿ ಸರಿತಾಳನ್ನು ಕಂಡು ರಂಜಿತ್ ತುಂಬಾ ಖುಷಿಯಲ್ಲಿದ್ದರು. ಈ ಮದುವೆ ಇಡೀ ಪ್ರದೇಶದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚೆಗೆ ಬಿಹಾರದಲ್ಲಿ 2 ಮಕ್ಕಳಿದ್ದ ಪತ್ನಿಗೆ ಗಂಡನೇ ಆಕೆಯ ಲವರ್ ಜೊತೆಗೆ ಮದುವೆ ಮಾಡಿಸಿದ್ದ. ಆಕೆ ತನ್ನ ಹಳೇ ಲವರ್ ಜೊತೆ ನಿರಂತರ ಸಂಪರ್ಕದಲ್ಲಿದ್ದ ಕಾರಣ ಗಂಡನೇ ಈ ಮದುವೆ ಮಾಡಿಸಿ ನಿಟ್ಟುಸಿರು ಬಿಟ್ಟಿದ್ದ.