ಚೆನ್ನೈ(ತಮಿಳುನಾಡು): ಚೆನ್ನೈನಲ್ಲಿರುವ ಸೆಕ್ರೆಟರಿಯೇಟ್ ಹೊರಗೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಮಹಿಳಾ ಹೆಡ್ಕಾನ್ಸ್ಟೇಬಲ್ ಮರಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ದುರ್ಘಟನೆಯಲ್ಲಿ ಮತ್ತೋರ್ವ ಹೆಡ್ಕಾನ್ಸ್ಟೇಬಲ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾದರು.
ಕವಿತಾ ಮೃತಪಟ್ಟ ಹೆಡ್ಕಾನ್ಸ್ಟೇಬಲ್. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕವಿತಾ ಅವರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಮಂಗಳವಾರ ಬೆಳಗ್ಗೆ 9.15ಕ್ಕೆ ಘಟನೆ ಸಂಭವಿಸಿದೆ. ಸುಮಾರು ಆರಕ್ಕೂ ಹೆಚ್ಚು ಮಂದಿ ಮರವಿದ್ದ ಸ್ಥಳದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದು, ಎಲ್ಲರೂ ಸ್ಥಳದಿಂದ ಪಕ್ಕಕ್ಕೆ ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಮುರುಗನ್ ಎಂಬ ಹೆಡ್ಕಾನ್ಸ್ಟೇಬಲ್ಗೆ ಸಣ್ಣಪುಟ್ಟ ಗಾಯಗಳಾಗಿದೆ.
ಕವಿತಾ ಅವರ ಪತಿ ದಕ್ಷಿಣ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದು, ಅವರ ಕುಟುಂಬ ತೊಂಡಿಯಾರ್ಪೇಟ್ ರೈಲ್ವೆ ವಸತಿ ಕಟ್ಟಡದಲ್ಲಿ ವಾಸವಿದೆ. ಪೊಲೀಸ್ ಮೂಲಗಳ ಪ್ರಕಾರ, ಮಳೆಯ ಕಾರಣದಿಂದ ಆ ಮರವಿದ್ದ ಪ್ರದೇಶದಲ್ಲಿ ಕಡಿಮೆ ಜನರಿದ್ದರು. ಸಾಮಾನ್ಯ ದಿನಗಳಲ್ಲಿ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾವಣೆಯಾಗುತ್ತಿದ್ದು, ಆ ವೇಳೆ ಮರ ಉರುಳಿದ್ದರೆ, ಅತಿ ಹೆಚ್ಚು ಸಾವು ನೋವುಗಳು ಸಂಭವಿಸುವ ಸಾಧ್ಯತೆ ಇತ್ತು.
ಇದನ್ನೂ ಓದಿ: ನಿಯಂತ್ರಣ ತಪ್ಪಿ ಗುಡಿಸಲಿಗೆ ಟ್ರಕ್ ಡಿಕ್ಕಿ; ಆರು ಮಂದಿ ದಾರುಣ ಸಾವು, ಹಲವರ ಸ್ಥಿತಿ ಗಂಭೀರ