ನವದೆಹಲಿ: ದೆಹಲಿಯ ನ್ಯೂ ಉಸ್ಮಾನ್‌ಪುರ ಪ್ರದೇಶದಲ್ಲಿ 22 ವರ್ಷದ ಮಹಿಳೆ ಮೇಲೆ ಆಕೆಯ ಅತ್ತೆ ಆ್ಯಸಿಡ್ ದಾಳಿ ಮಾಡಿರುವ ಘಟನೆ ಬುಧವಾರ ನಡೆದಿದ್ದು ಬೆಳಕಿಗೆ ಬಂದಿದೆ. ದಾಳಿಯಿಂದ ಮಹಿಳೆ ದೇಹ ಶೇ.25ರಷ್ಟು ಸುಟ್ಟ ಗಾಯಗಳಾಗಿವೆ. ಗಾಯಾಳುವನ್ನು ಸ್ಥಳೀಯ ಜೆಪಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃತ್ಯ ಎಸಗಿದ ಅತ್ತೆ ಅಂಜಲಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಬಳಿಕ ಆರೋಪಿ ಅಂಜಲಿ ಮತ್ತು ಕುಟುಂಬ ಸದಸ್ಯರು ಪರಾರಿಯಾಗಿದ್ದರು. ಆದ್ರೆ ಪೊಲೀಸರು ಕಾರ್ಯಾಚರಣೆ ನಡೆಸಿ, ಶುಕ್ರವಾರ ದೆಹಲಿಯ ಸಂತ ನಗರ ಪ್ರದೇಶದಲ್ಲಿ ಅಂಜಲಿಯನ್ನು ಬಂಧಿಸಿದ್ದಾರೆ. ನ್ಯೂ ಉಸ್ಮಾನ್‌ಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323, 326A, 34ರ ಅಡಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತ ಮಹಿಳೆಗೆ ಕಳೆದ ಎರಡು ವರ್ಷಗಳ ಹಿಂದೆ ಮದುವೆಯಾಗಿತ್ತು. 6 ತಿಂಗಳ ಮಗು ಕೂಡ ಇದೆ. ಕುಟುಂಬದೊಂದಿಗೆ ನ್ಯೂ ಉಸ್ಮಾನ್‌ಪುರ ಪ್ರದೇಶದಲ್ಲಿ ವಾಸಿತ್ತಿದ್ದರು. ಆಗಾಗ ಗಂಡನ ತಾಯಿ ಜೊತೆ ಜಗಳವಾಗುತಿತ್ತು. ಇದರಿಂದ ಬೇಸತ್ತ ಸಂತ್ರಸ್ತೆ ತನಗೆ ಮತ್ತು ತನ್ನ ಮಗಳಿಗೆ ಅತ್ತೆಯ ಕಟುಂಬದವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿತ್ತು. ಎರಡೂ ಕಟುಂಬದವರು ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಇದರಿಂದ ಕೋಪಗೊಂಡ ಆರೋಪಿ ಅಂಜಲಿ ಸೆಪ್ಟೆಂಬರ್ 20 ರಂದು ಸಂಜೆ 5:30ರ ಸುಮಾರಿಗೆ ತನ್ನ ಸೊಸೆ ಮೇಲೆ ಆ್ಯಸಿಡ್ ದಾಳಿ ಮಾಡಿದ್ದಾಳೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಉತ್ತರಪ್ರದೇಶದಲ್ಲೂ ಇಂತಹದ್ದೇ ಘಟನೆ: ಮದುವೆ ಆಗಿ ಎರಡೇ ದಿನಕ್ಕೆ ಮಹಿಳೆ ತನ್ನ ಪ್ರಿಯಕರನೊಂದಿಗೆ ಮಾತನಾಡುತ್ತಿರುವುದಕ್ಕೆ ಕೋಪಗೊಂಡ ತಂದೆ ಮತ್ತು ಸೋದರಮಾವ ಆ್ಯಸಿಡ್ ಎರಚಿ ಗಾಯಗೊಳಿಸಿರುವ ಘಟನೆ ಇತ್ತೀಚೆಗೆ ಉತ್ತರಪ್ರದೇಶದ ಬರೇಲಿ ಜಿಲ್ಲೆಯ ಅಗ್ರಾಸ್ ಗ್ರಾಮದಲ್ಲಿ ನಡೆದಿತ್ತು. ತಂದೆ ಮತ್ತು ಸೋದರ ಮಾವ ಸೇರಿ ಮಹಿಳೆ ಮೇಲೆ ಆಸಿಡ್ ಎರಚಿದ್ದು, ಪ್ರಕರಣ ದಾಖಲಾಗಿದೆ.
ಕೋರ್ಟ್ ಆವರದಲ್ಲೆ ಆ್ಯಸಿಡ್ ದಾಳಿ: ನ್ಯಾಯಾಲಯದ ಆವರಣದಲ್ಲೇ ಪತ್ನಿಯ ಮೇಲೆ ಪತಿ ಆ್ಯಸಿಡ್ ದಾಳಿ ಮಾಡಿದ್ದ ಘಟನೆ ಕೆಲದಿನಗಳ ಹಿಂದೆ ಕೊಯಮತ್ತೂರಿನಲ್ಲಿ ನಡೆದಿತ್ತು. ಕೌಟುಂಬಿಕ ಕಲಹದ ಹಿನ್ನೆಲೆ ಆರೋಪಿ ಪತಿ ಶಿವಕುಮಾರ್ ಎಂಬಾತ ತನ್ನ ಪತ್ನಿ ಕವಿತಾ ಎಂಬುವವರ ಮೇಲೆ ಆ್ಯಸಿಡ್ ಎರಚಿದ್ದ. ಕಲಹ ಹಿನ್ನೆಲೆ ಪತ್ನಿ ಕವಿತಾ ತನ್ನ ಪತಿ ವಿರುದ್ಧ ದೂರು ದಾಖಲಿಸಿದ್ದರು. ವಿಚಾರಣೆ ದಿನ ಪತಿ ಹಾಗೂ ಪತ್ನಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆಗ ಶಿವಕುಮಾರ್ ಆಸಿಡ್ ಅನ್ನು ಕವಿತಾ ಮೇಲೆ ಎರಚಿ ದಾಳಿ ಮಾಡಿದ್ದ. (ಎಎನ್ಐ)
ಇದನ್ನೂ ಓದಿ: ಪಾಣಿಪತ್‌ನಲ್ಲಿ ನಾಲ್ವರು ಮಹಿಳೆಯರ ಮೇಲೆ ಗ್ಯಾಂಗ್‌ರೇಪ್, ಓರ್ವ ಸಂತ್ರಸ್ತೆ ಸಾವು, ನಗ-ನಾಣ್ಯ ಲೂಟಿ!