ಭಿಲ್ವಾರ್(ರಾಜಸ್ಥಾನ): ಆರ್ಥಿಕತೆಯ ಎಲ್ಲ ಕ್ಷೇತ್ರಗಳಲ್ಲೂ ಮಹಳೆ ಪುರುಷರಿಗೆ ಸರಿಸಮಾನವಾಗಿ ದುಡಿದು ಬೆಳೆದು ನಿಂತಿದ್ದಾಳೆ. ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳುತ್ತಿದ್ದಾಳೆ. ಆದರೆ, ರಾಜಸ್ಥಾನದಲ್ಲಿ ಮಹಿಳೆಯರ ಮೇಲೆ ಅತ್ಯಂತ ಹೀನಾಯವಾಗಿ ದೌರ್ಜನ್ಯ ಎಸಗುವ ಅನಿಷ್ಟ ಪದ್ಧತಿಯೊಂದು ಜಾರಿಯಲ್ಲಿದೆ. ಅದರ ಹೆಸರೇ ಕನ್ಯತ್ವ ಪರೀಕ್ಷೆ. ಇಂಥದ್ದೊಂದು ಪರೀಕ್ಷೆಯಲ್ಲಿ ನಾಪಾಸಾದ ಯುವತಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಮೇ. 11ರಂದು ಈ ಘಟನೆ ನಡೆದಿದೆ. ಕನ್ಯತ್ವ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದಕ್ಕಾಗಿ ಪಂಚಾಯ್ತಿ ಸದಸ್ಯರು ಈ ವಿಕೃತ ನಿರ್ಧಾರ ಕೈಗೊಂಡಿದ್ದಾರೆಂದು ಹೇಳಲಾಗ್ತಿದೆ.
ಘಟನೆಯ ಸಂಪೂರ್ಣ ವಿವರ ಹೀಗಿದೆ: ರಾಜಸ್ಥಾನದ ಭಿಲ್ವಾರ್ನಲ್ಲಿ ನಡೆದ ಘಟನೆ ಇದು. ಮೇ. 11ರಂದು ಮದುವೆ ನಡೆದಿತ್ತು. ಯುವತಿಯನ್ನು ಗಂಡನ ಮನೆಯವರು ಕರೆದುಕೊಂಡು ಹೋಗಿದ್ದಾರೆ. ಅದೇ ದಿನ ರಾತ್ರಿ ಕನ್ಯತ್ವ ಪರೀಕ್ಷೆಗೆ ಒಳಪಡಿಸಿದ್ದಾರೆ. ಇದರಲ್ಲಿ ಯುವತಿ ವಿಫಲವಾಗಿದ್ದಾಳೆ. ಮದುವೆ ಮಾಡಿಕೊಳ್ಳುವುದಕ್ಕೂ ಮುಂಚೆ ಆಕೆಯ ಮೇಲೆ ನೆರೆಹೊರೆಯವರು ಅತ್ಯಾಚಾರವೆಸಗಿದ್ದರಂತೆ. ಇದರ ಬಗ್ಗೆ ಮಹಿಳೆ ಹೇಳಿಕೊಂಡಿದ್ದಾಳೆ. ಕಟ್ಟಿಕೊಂಡ ಗಂಡ, ಅತ್ತೆಯಂದಿರು ನೈತಿಕ ಬೆಂಬಲ ನೀಡುವ ಬದಲಿಗೆ ಆಕೆಗೆ ಇನ್ನಿಲ್ಲದ ಮಾನಸಿಕ, ದೈಹಿಕ ಕಿರುಕುಳ ನೀಡಿದ್ದಾರೆ. ಅಷ್ಟೇ ಯಾಕೆ? ಪಂಚಾಯ್ತಿಯನ್ನೂ ಸೇರಿಸಿದ್ದಾರೆ. ಪಂಚಾಯ್ತಿಯ ಪ್ರಮುಖರು ಆಕೆಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಇಲ್ಲಿನ ಸುಭಾಷ್ ನಗರ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಸಂತ್ರಸ್ತೆ ಹಾಗೂ ಆಕೆಯ ಕುಟುಂಬ ನ್ಯಾಯಕ್ಕಾಗಿ ಪೊಲೀಸ್ ವರಿಷ್ಠಾಧಿಕಾರಿ ಮುಂದೆ ಮನವಿ ಸಲ್ಲಿಸಿದೆ. ಪ್ರಕರಣದ ಗಂಭೀರತೆ ಅರಿತ ಅಧಿಕಾರಿಗಳು ಖಾಪ್ ಪಂಚಾಯ್ತಿ ನಿಷೇಧಿಸಿದ್ದಾರೆ. ಜೊತೆಗೆ, ವಿವಾಹಿತ ಮಹಿಳೆಯ ಪತಿ ಮತ್ತು ಅತ್ತೆಯಂದಿರು ಸೇರಿದಂತೆ ಪಂಚಾಯ್ತಿಯಲ್ಲಿ ಭಾಗಿಯಾಗಿರುವ ಎಲ್ಲ ಸದಸ್ಯರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.
ಏನಿದು ಕನ್ಯತ್ವ ಪರೀಕ್ಷೆ? ಯಾಕಿಂಥ ಕೆಟ್ಟ ಪದ್ಧತಿ?: ರಾಜಸ್ಥಾನದ ಕೆಲವೊಂದು ಪ್ರದೇಶಗಳಲ್ಲಿ 'ಕುಕ್ಡಿ' ಎಂಬ ಪದ್ಧತಿ ಜಾರಿಯಲ್ಲಿದೆ. ಮದುವೆಯಾದ ಮೊದಲ ರಾತ್ರಿ ವರನ ಕಡೆಯವರು ವಧುವಿಗೆ ಕನ್ಯತ್ವ ಪರೀಕ್ಷೆ ನಡೆಸುತ್ತಾರೆ. ವಧು ರಾತ್ರಿ ಗಂಡನೊಂದಿಗೆ ದೈಹಿಕ ಸಂಪರ್ಕ ನಡೆಸಿದಾಗ ಬಿಳಿಯ ಹಾಸಿಗೆಯ (ರಕ್ತ) ಮೇಲೆ ಕಲೆಯಾಗಬೇಕು. ಇದನ್ನು ಬೆಳಗ್ಗೆ ಗ್ರಾಮದ ಎಲ್ಲರಿಗೂ ತೋರಿಸಲೇಬೇಕಂತೆ. ಅದರ ಮೂಲಕ ಆಕೆಗೆ ಶೀಲದ ಸರ್ಟಿಫಿಕೇಟ್ ನೀಡುತ್ತಾರೆ. ಜೊತೆಗೆ, ಗಂಡನ ಮನೆಯಲ್ಲಿ ಇಟ್ಟುಕೊಳ್ಳುವ ಬಗ್ಗೆ ಅಂತಿಮ ತೀರ್ಮಾನ ಮಾಡುತ್ತಾರೆ.
ಒಂದು ವೇಳೆ ರಕ್ತದ ಕುರುಹು ಇಲ್ಲದಿದ್ದರೆ ಯುವತಿ ಈ ಮೊದಲು ಬೇರೆಯವರೊಂದಿಗೆ ಸಂಬಂಧ ಹೊಂದಿದ್ದಾಗಿ ನಂಬಲಾಗುತ್ತದೆ. ಇದಕ್ಕಾಗಿ ಪಂಚಾಯ್ತಿ ಸೇರಿಸಿ ಆಕೆಯನ್ನು ಮನೆಯಿಂದ ಹೊರಹಾಕುವ ಅಥವಾ ಹೆಚ್ಚಿನ ವರದಕ್ಷಿಣೆ ಕೇಳುವ ಕೆಲಸ ಅಥವಾ ಸಮುದಾಯದಿಂದಲೇ ಬಹಿಷ್ಕಾರ ಹಾಕುವ ಅಮಾನವೀಯ ಕೆಲಸಕ್ಕೆ ಕೈ ಹಾಕುತ್ತಾರೆ!.