ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಕೆಲ ದಿನಗಳ ಹಿಂದೆ ನಡೆದಿದ್ದ ವ್ಯಕ್ತಿಯ ಸಾವಿನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಇಲ್ಲಿನ ನಿವಾಸಿ ರಿಷಬ್ ಎಂಬ ವ್ಯಕ್ತಿಯ ಅನುಮಾನಾಸ್ಪದ ಸಾವಿಗೆ ಪತ್ನಿ ಸ್ವಪ್ನಾ ನೀಡಿದ್ದ ಓವರ್ ಡೋಸ್ ಔಷಧಿಯೇ ಕಾರಣ ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಆಸ್ತಿ ವಿಚಾರವಾಗಿ ಮಾತನಾಡುವಾಗ ರಿಷಭ್ ಪತ್ನಿಯನ್ನು ಕಡೆಗಣಿಸುತ್ತಿದ್ದ. ಹೀಗಾಗಿ ಪತಿಯನ್ನು ಕೂಲ್ಲಲು ಯೋಜನೆ ರೂಪಿಸಿದ್ದಳು. ಇದಕ್ಕಾಗಿ ಅನೇಕ ಅಪರಾಧ ಧಾರಾವಾಹಿಗಳನ್ನೂ ನೋಡುತ್ತಿದ್ದಳು, ಇದರಿಂದ ಪ್ರೇರಿತಗೊಂಡು ಓವರ್ ಡೋಸ್ ನೀಡಿ ಹತ್ಯೆ ಮಾಡಲು ಯೋಚಿಸಿದ್ದಳು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಹಲ್ಲೆ ಮಾಡಿಸಿ ಕೂಲೆ ಯತ್ನ: ಇದಕ್ಕೂ ಮುನ್ನ ಆರೋಪಿ ಸ್ವಪ್ನಾ ತನ್ನ ಸಹಚರರೊಂದಿಗೆ ಸೇರಿಕೊಂಡು ಪತಿಯ ಮೇಲೆ ಹಲ್ಲೆ ಮಾಡಿಸಿದ್ದಳು. ಈ ದಾಳಿಯಲ್ಲಿ ರಿಷಬ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ನಂತರ ಗುಣಮುಖರಾಗಿ ಡಿ.1 ರಂದು ರಿಷಬ್ ಡಿಸ್ಚಾರ್ಜ್ ಆಗಿದ್ದರು. ಆದರೆ, ಡಿ 3ರಂದು ಅವರ ಆರೋಗ್ಯ ಮತ್ತೆ ಹದಗೆಟ್ಟು ಮೃತಪಟ್ಟಿದ್ದರು.
ಆಗ ಪತ್ನಿಯೇ ಗಂಡನ ಸಾವಿನ ಬಗ್ಗೆ ತನಿಖೆ ನಡೆಸುವಂತೆ ನಾಟಕ ಮಾಡಿ ಪೊಲೀಸರಿಗೆ ದೂರು ನೀಡಿದ್ದಳು. ಇತ್ತ, ವೈದ್ಯರು, ರಿಷಬ್ ಸಾವಿಗೆ ಹೆಚ್ಚಿನ ಪ್ರಮಾಣದಲ್ಲಿ ಔಷಧ ಸೇವನೆ ಕಾರಣ ಎಂದು ಶಂಕೆ ವ್ಯಕ್ತಪಡಿಸಿದ್ದರು. ಹೀಗಾಗಿ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿದ್ದರು. ಈ ವರದಿಯಲ್ಲಿ ಅತಿಯಾದ ಡ್ರಗ್ ಓವರ್ ಡೋಸ್ ಸೇವನೆಯಿಂದ ಸಾವನ್ನಪ್ಪಿರುವುದಾಗಿ ದೃಢಪಟ್ಟಿದೆ.
ಇದರಿಂದ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡು ಪತ್ನಿಯನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ, ತಾನೇ ಗಂಡನ ಮೇಲೆ ಹಲ್ಲೆ ಮಾಡಿಸಿದ್ದು ಮತ್ತು ನಂತರ ಅತನಿಗೆ ಓವರ್ ಡೋಸ್ ನೀಡಿದ್ದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ.
(ಓದಿ: ಪತ್ನಿಗೆ ಸ್ನೇಹಿತರೊಂದಿಗೆ ಮಲಗಲು ಪೀಡಿಸಿದ: ಖಾಸಗಿ ದೃಶ್ಯ ಸೆರೆಹಿಡಿದು ಹೆಂಡತಿಗೇ ಬ್ಲಾಕ್ಮೇಲ್ ಮಾಡಿದ ಪತಿ)