ಕೇತುಗ್ರಾಮ(ಪಶ್ಚಿಮ ಬಂಗಾಳ) : ಆಸ್ಪತ್ರೆಯಲ್ಲಿ ನರ್ಸ್ ಆಗಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡಿದ್ದಕ್ಕೆ ಪತಿ ತನ್ನ ಪತ್ನಿಯ ಮುಂಗೈಯನ್ನೇ ಕತ್ತರಿಸಿ ವಿಕೃತಿ ಮೆರೆದಿದ್ದಾನೆ. ಪತ್ನಿ ತನ್ನನ್ನು ಬಿಟ್ಟು ಹೋಗುತ್ತಾಳೆ ಎಂದು ಭಾವಿಸಿದ್ದ ಪತಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗ್ತಿದೆ.
ಪೂರ್ವ ಬುರ್ದ್ವಾನ್‌ನ ಕೇತುಗ್ರಾಮ್‌ನ ಕೋಜಲ್ಸಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡ ರೇಣು ಖಾತುನ್ ಅವರನ್ನು ದುರ್ಗಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.
ವಿವರ: ಘಟನೆ ನಡೆದಾಗಿನಿಂದ ಆರೋಪಿ ಪತಿ ಶೇರ್ ಮೊಹಮ್ಮದ್ ಮತ್ತು ಆತನ ಕುಟುಂಬದವರು ಪರಾರಿಯಾಗಿದ್ದಾರೆ. ಸ್ಥಳೀಯ ಮೂಲಗಳ ಪ್ರಕಾರ ರೇಣು ತರಬೇತಿ ಪಡೆದ ನರ್ಸ್ ಆಗಿದ್ದು, ದುರ್ಗಾಪುರದ ಖಾಸಗಿ ನರ್ಸಿಂಗ್ ಹೋಂನಲ್ಲಿ ಕೆಲಸ ಮಾಡುತ್ತಿದ್ದರು.
ಇತ್ತೀಚೆಗಷ್ಟೇ ಸರ್ಕಾರಿ ನೌಕರಿಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇರಬೇಕಿತ್ತು. ಆದರೆ, ಗಂಡ ಆಕೆಯನ್ನು ಕೆಲಸಕ್ಕೆ ಕಳುಹಿಸಲು ಮುಂದಾಗಿರಲಿಲ್ಲ. ಈ ಕಿರಾತಕ ನಿರುದ್ಯೋಗಿಯಾಗಿದ್ದು, ಎಲ್ಲಿ ತನ್ನನ್ನು ಬಿಟ್ಟು ಹೋಗುತ್ತಾಳೆ ಎಂದು ಭಾವಿಸಿ ಜಗಳ ಶುರು ಮಾಡಿದ್ದಾನೆ.
ಘಟನೆ ನಡೆದ ದಿನ ಜಗಳ ವಿಕೋಪಕ್ಕೆ ಹೋದಾಗ ಶೇರ್ ಮೊಹಮ್ಮದ್ ತನ್ನ ಪತ್ನಿಗೆ ಹರಿತವಾದ ಆಯುಧದಿಂದ ಹಲ್ಲೆ ಮಾಡಿ ಆಕೆಯ ಮುಂಗೈಯನ್ನು ಕತ್ತರಿಸಿದ್ದಾನೆ. ರಕ್ತಸಿಕ್ತ ಸ್ಥಿತಿಯಲ್ಲಿ ರೇಣು ಆಸ್ಪತ್ರೆಗೆ ದಾಖಲಾದ ನಂತರ ವೈದ್ಯರು ರೇಣುವಿನ ಬಲಗೈ ಮಣಿಕಟ್ಟಿನ್ನೇ ತೆಗೆಯುವ ಪರಿಸ್ಥಿತಿ ಎದುರಾಗಿದೆ.
ಶೇರ್ ಮೊಹಮ್ಮದ್ ಓದುತ್ತಿರುವಾಗ ರೇಣು ಪರಿಚಯವಾಗಿದೆ. ನಂತರ ಮದುವೆ ಮಾಡಿಕೊಂಡಿದ್ದಾರೆ. ಆ ವೇಳೆ 1 ಲಕ್ಷ ರೂ. ನಗದು, ಚಿನ್ನಾಭರಣ ಮತ್ತಿತರ ವರೋಪಚಾರವನ್ನು ನೀಡಲಾಗಿತ್ತು. ಆದರೆ, ರೇಣು ಕೆಲಸ ಮಾಡುವುದನ್ನು ಶೇರ್ ಒಪ್ಪುತ್ತಿರಲಿಲ್ಲವಂತೆ. ಈ ಕಾರಣಕ್ಕೆ ನಿರಂತರ ಗಲಾಟೆ ನಡೆಯುತ್ತಿತ್ತು ಎನ್ನಲಾಗ್ತಿದೆ.
ಇದನ್ನೂ ಓದಿ: ಜಮ್ಮು- ಕಾಶ್ಮೀರದಲ್ಲಿ ಉಗ್ರರು, ಭದ್ರತಾ ಸಿಬ್ಬಂದಿ ಮಧ್ಯೆ ಗುಂಡಿನ ಚಕಮಕಿ