ಕರ್ನೂಲ್, ಆಂಧ್ರಪ್ರದೇಶ: ಯಾರಾದರೂ ಮೃತಪಟ್ಟರೆ ಅವರನ್ನು ಕುಟುಂಬಸ್ಥರು ಮತ್ತು ಸಂಬಂಧಿಕರಿಗೆ ಮಾಹಿತಿ ನೀಡಿ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡುತ್ತಾರೆ. ಆದರೆ, ಪತಿಯ ಸಾವಿನ ವಿಚಾರ ತಿಳಿದ ಪತ್ನಿ ಮೃತದೇಹವನ್ನು ಮನೆಯಯೊಳಗೇ ಬೆಂಕಿ ಹಚ್ಚಿ ದಹಿಸಿದ್ದಾಳೆ. ಈ ಘಟನೆ ಕರ್ನೂಲ್ ಜಿಲ್ಲೆಯ ಪತ್ತಿಕೊಂಡ ಪಟ್ಟಣದಲ್ಲಿ ಸೋಮವಾರ ನಡೆದಿದ್ದು, ಸಂಚಲನ ಮೂಡಿಸಿದೆ.
ಘಟನೆಯ ವಿವರ: ಕರ್ನೂಲ್ ಜಿಲ್ಲೆಯ ಪತ್ತಿಕೊಂಡ ಪಟ್ಟಣದ ಹರಿಕೃಷ್ಣ ಪ್ರಸಾದ್ (60) ಮೃತ ವ್ಯಕ್ತಿಯಾಗಿದ್ದಾರೆ. ದೇಹವನ್ನು ಸುಟ್ಟು ಹಾಕಿದ ಲಲಿತಾ ಮೆಡಿಕಲ್ ಶಾಪ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದು, ಇಬ್ಬರೂ ವೈದ್ಯರೇ. ಹಿರಿಯ ಮಗ ದಿನೇಶ್ ಕರ್ನೂಲ್ನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರೆ, ಕಿರಿಯ ಮಗ ಮುಖೇಶ್ ಕೆನಡಾದಲ್ಲಿ ಡಾಕ್ಟರ್ ಆಗಿದ್ದಾರೆ. 2016 ರಿಂದ ಹರಿಕೃಷ್ಣ ಪ್ರಸಾದ್ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇತ್ತು.
ಹಾಸಿಗೆ ಹಿಡಿದಿದ್ದ ಹರಿಕೃಷ್ಣ: ಕೆಲ ವರ್ಷಗಳಿಂದ ಹರಿಕೃಷ್ಣ ಅವರು ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿದಿದ್ದರು. ಒಂದೆಡೆ ಪತ್ನಿ ಲಲಿತಾ ಅವರು ಮೆಡಿಕಲ್ ಶಾಪ್ ನಡೆಸುತ್ತಲೇ ಗಂಡನ ಸೇವೆ ಮಾಡುತ್ತಿದ್ದರು. ಸೋಮವಾರ ಬೆಳಗ್ಗೆ ಹರಿಪ್ರಸಾದ್ ಅವರಿಗೆ ಹೃದಯಾಘಾತವಾಗಿ ನಿಧನರಾಗಿದ್ದಾರೆ ಎನ್ನಲಾಗಿದೆ. ಪತಿಯ ನಾಡಿ ಹಿಡಿದು ನೋಡಿದ ಪತ್ನಿ, ಸಾವನ್ನಪ್ಪಿದ್ದಾನೆ ಎಂದು ತಿಳಿದು, ಸಾವಿನ ವಿಷಯವನ್ನು ಹಿರಿಯ ಮಗನಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ.
ಮೃತದೇಹವನ್ನು ಸಂಸ್ಕಾರ ಮಾಡಲು ತನಗೆ ಸಹಾಯಕರಾಗಿ ಯಾರೂ ಇಲ್ಲ. ಹೀಗಾಗಿ ನಾನೇ ದಹಿಸಿ ಹಾಕುವೆ ಎಂದು ಹೇಳಿದ್ದಾರೆ. ಇದಾದ ಬಳಿಕ ಪುತ್ರ ದಿನೇಶ್ ಕೂಡಲೇ 100 ಕ್ಕೆ ಕರೆ ಮಾಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಮನೆಯಲ್ಲೇ ಮೃತದೇಹ ದಹನ: ಅಷ್ಟರೊಳಗೆ ಲಲಿತಾ ಅವರು ತನ್ನ ಗಂಡನ ಮೈಮೇಲೆ ಹಳೆ ಪುಸ್ತಕಗಳು, ರಟ್ಟಿನ ಪೆಟ್ಟಿಗೆ, ಬಟ್ಟೆಗಳನ್ನು ಹಾಕಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. ಮನೆಯೊಳಗಿಂದ ಹೊಗೆ ಬಂದಿದ್ದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ದೇಹ ಶೇ.90 ರಷ್ಟು ಸುಟ್ಟು ಕರಕಲಾಗಿತ್ತು. ಪುತ್ರ ದಿನೇಶ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುಟ್ಟ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪತ್ತಿಕೊಂಡ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಕಳೆದ ಕೆಲ ವರ್ಷಗಳಿಂದ ಮಹಿಳೆ ಲಲಿತಾ ಅವರು ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಆಕೆಯ ಮಾನಸಿಕ ಸ್ಥಿತಿಯೂ ಸರಿಯಿಲ್ಲ. ಇಂದು ಬೆಳಗ್ಗೆ ಹೃದಯ ಬಡಿತ, ನಾಡಿಮಿಡಿತ ಪರಿಶೀಲಿಸಿ ಗಂಡ ಮೃತಪಟ್ಟಿದ್ದಾನೆ ಎಂದು ಆಕೆಯೇ ಮನೆಯಲ್ಲಿ ದಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಮಿಕರ ಸಾವು: ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ವಾಹನ- ಬಸ್ ಡಿಕ್ಕಿಯಾಗಿ ನಾಲ್ವರು ಕೂಲಿಕಾರ್ಮಿಕರು ಸಾವನ್ನಪ್ಪಿದ ಘಟನೆ ನಡೆದಿದೆ. ಕೆಲಸ ಮುಗಿಸಿ ಮನೆಗೆ ಬರುತ್ತಿದ್ದವರಿಗೆ ಆರ್ಟಿಸಿ ಬಸ್ನ ರೂಪದಲ್ಲಿ ಸಾವು ಬಂದೊದಗಿದೆ. ವಿಜಯವಾಡ ನಗರದ ವಾಂಬೆ ಕಾಲೋನಿಯ ಪಿಲ್ಲಿ ಶ್ರೀನು (35), ಚಂದ್ರಶೇಖರ್ (33), ಕೆ.ಶ್ರೀನು (22) ಮತ್ತು ಸಾಯಿ (32) ಮೃತರು.
ಇದನ್ನೂ ಓದಿ: ಕರಾಳ ಸೋಮವಾರ: ಪ್ರತ್ಯೇಕ ದುರಂತದಲ್ಲಿ 10 ಮಂದಿ ಕಾರ್ಮಿಕರ ದಾರುಣ ಸಾವು