ನವ ದೆಹಲಿ: ಅಫ್ಘಾನಿಸ್ತಾನಕ್ಕೆ 200 ಕೋಟಿ ರೂಪಾಯಿ ಹಣಕಾಸು ನೆರವು ನೀಡಲು ಬಜೆಟ್‌ನಲ್ಲಿ ಹಣ ಮೀಸಲಿರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಪ್ರಶ್ನಿಸಿದ್ದಾರೆ. ಶಿಕ್ಷಣ, ಆರೋಗ್ಯ ಮತ್ತು ದೆಹಲಿಗೆ ನೀಡಬೇಕಾಗಿದ್ದ ಬಜೆಟ್ ಅನುದಾನವನ್ನು ಕತ್ತರಿಸಿ, ಅದನ್ನು ತಾಲಿಬಾನ್ ಆಡಳಿತವಿರುವ ದೇಶಕ್ಕೆ ನೀಡುವುದು ಸರಿಯೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ಸುಪ್ರೀಂ ಕೋರ್ಟ್ ನಡುವಿನ ಭಿನ್ನಾಭಿಪ್ರಾಯಗಳ ಬಗ್ಗೆ ಸಹ ಕೇಜ್ರಿವಾಲ್ ಮಾತನಾಡಿದ್ದು, ಇತರರ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದು ಕೇಜ್ರಿವಾಲ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಎಲ್ಲರೊಂದಿಗೂ ಏಕೆ ಜಗಳ ಮಾಡುತ್ತಿದೆ? ನ್ಯಾಯಾಧೀಶರು, ಸುಪ್ರೀಂ ಕೋರ್ಟ್, ರಾಜ್ಯ ಸರಕಾರಗಳು, ರೈತರು ಮತ್ತು ವ್ಯಾಪಾರಿಗಳೊಂದಿಗೆ ಏಕೆ ಜಗಳವಾಡುತ್ತಿದೆ? ಎಲ್ಲರೊಂದಿಗೂ ಜಗಳವಾಡುವುದರಿಂದ ದೇಶ ಪ್ರಗತಿಯಾಗುವುದಿಲ್ಲ. ನಿಮ್ಮ ಕೆಲಸ ನೀವು ಮಾಡಿ ಮತ್ತು ಇತರರು ಅವರ ಕೆಲಸ ಮಾಡಲು ಬಿಡಿ, ಇತರರ ಕೆಲಸದಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದು ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ದೆಹಲಿಯ ಎಎಪಿ ಸರ್ಕಾರವು ಕೇಂದ್ರದಿಂದ ನೇಮಕಗೊಂಡ ಲೆಫ್ಟಿನೆಂಟ್ ಗವರ್ನರ್ ಜೊತೆಗೆ ಆಡಳಿತ ಮತ್ತು ಅಧಿಕಾರ ವ್ಯಾಪ್ತಿ-ಸಂಬಂಧಿತ ವಿಷಯಗಳ ಬಗ್ಗೆ ಸತತವಾಗಿ ಜಟಾಪಟಿ ನಡೆಸುತ್ತಿದೆ.
ದೇಶದಲ್ಲಿ ಶಿಕ್ಷಣ, ಆರೋಗ್ಯ ಮತ್ತು ದೆಹಲಿಗಾಗಿ ನೀಡಬೇಕಿದ್ದ ಹಣವನ್ನು ಕಡಿತಗೊಳಿಸುವ ಮೂಲಕ ತಾಲಿಬಾನ್‌ಗೆ ಹಣ ನೀಡುವುದು ಸರಿಯೇ? ಜನ ಇದನ್ನು ಬಲವಾಗಿ ವಿರೋಧಿಸುತ್ತಿದ್ದಾರೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ಅವರು ಬರೆದಿದ್ದಾರೆ. 2023-24ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ತಾಲಿಬಾನ್ ಆಡಳಿತವಿರುವ ಅಫ್ಘಾನಿಸ್ತಾನಕ್ಕೆ ಸಹಾಯ ಮಾಡಲು 200 ಕೋಟಿ ರೂಪಾಯಿ ಮೀಸಲಿಟ್ಟಿರುವುದು ಇಲ್ಲಿ ಗಮನಾರ್ಹ. 2023-24ರ ಕೇಂದ್ರ ಬಜೆಟ್‌ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ (ಎಂಇಎ) ಒಟ್ಟು ₹ 18,050 ಕೋಟಿ ಮೀಸಲಿಡಲಾಗಿದೆ. ಇದು ಕಳೆದ ವರ್ಷದ 17,250 ಕೋಟಿ ರೂಪಾಯಿಗಳಿಗಿಂತಶೇ 4.64ರಷ್ಟು ಹೆಚ್ಚಳವಾಗಿದೆ.
ವಿವಿಧ ದೇಶಗಳಿಗೆ ಅಭಿವೃದ್ಧಿ ನೆರವು ನೀಡಲು ಒಟ್ಟು 5,408 ಕೋಟಿ ರೂಪಾಯಿ ಮತ್ತು ಭಾರತದ ಭಾರತದ G20 ಪ್ರೆಸಿಡೆನ್ಸಿಗೆ 990 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಅಫ್ಘಾನಿಸ್ತಾನದ ಜನರೊಂದಿಗೆ ಭಾರತದ ವಿಶೇಷ ಸಂಬಂಧ ಮತ್ತು ಅಚಲ ಬದ್ಧತೆಯ ಮುಂದುವರಿಕೆಯಾಗಿ ಆ ದೇಶಕ್ಕೆ 200 ಕೋಟಿಯಷ್ಟು ಬಜೆಟ್ ನೆರವು ಮುಂದುವರಿಸಲಾಗಿದೆ. ಭೂತಾನ್‌ಗೆ 2,400 ಕೋಟಿ ರೂಪಾಯಿ ಮೀಸಲಿಡುವ ಮೂಲಕ ಈ ದೇಶಕ್ಕೆ ಅತಿ ಹೆಚ್ಚು ನೆರವು ಮೀಸಲಿಡಲಾಗಿದೆ. ಇದು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ನೀಡಲಾದ ಒಟ್ಟು ಅಭಿವೃದ್ಧಿ ನೆರವಿನ ಶೇಕಡಾ 41.04 ರಷ್ಟಿದೆ.
ಗ್ರೇಟರ್ ಮಾಲಿ ಕನೆಕ್ಟಿವಿಟಿ ಯೋಜನೆ ಮತ್ತು ಹೆಚ್ಚಿನ ಪರಿಣಾಮದ ಸಮುದಾಯ ಅಭಿವೃದ್ಧಿ ಯೋಜನೆಗಳಂತಹ ನಡೆಯುತ್ತಿರುವ ಯೋಜನೆಗಳಿಗೆ ನಿಧಿಯ ಅಗತ್ಯತೆಯನ್ನು ಪೂರೈಸಲು ಮಾಲ್ಡೀವ್ಸ್‌ಗೆ 400 ಕೋಟಿ ರೂಪಾಯಿ ಮೊತ್ತವನ್ನು ಮೀಸಲಿಡಲಾಗಿದೆ. ಬಜೆಟ್ ದಾಖಲೆಯ ಪ್ರಕಾರ, ನೇಪಾಳವು 550 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ನೆರವು ಪಡೆಯಲಿದೆ. ಮಾರಿಷಸ್ 460 ಕೋಟಿ ಮತ್ತು ಮ್ಯಾನ್ಮಾರ್ 400 ಕೋಟಿ ರೂಪಾಯಿ ಪಡೆಯಲಿವೆ.
ಇದನ್ನೂ ಓದಿ: ಪೇಶಾವರ್ ಮಸೀದಿ ದಾಳಿಗೆ ಅಫ್ಘಾನಿಸ್ತಾನ್ ಕಾರಣವಲ್ಲ: ತಾಲಿಬಾನ್ ಸಚಿವ ಮುಟ್ಟಾಕಿ