ಹೈದರಾಬಾದ್: ಬೈಕ್ ಅಥವಾ ಕಾರಿನಲ್ಲಿ ತೆರಳುತ್ತಿದ್ದಾಗ ರಸ್ತೆಯಲ್ಲಿ ಇದ್ದಕ್ಕಿದ್ದಂತೆ ನಾಯಿಗಳು ಜೋರಾಗಿ ಬೊಗಳುತ್ತಾ ವಾಹನವನ್ನು ಅಟ್ಟಿಸಿಕೊಂಡು ಬರುವುದನ್ನು ನಾವು-ನೀವು ಸಾಕಷ್ಟು ಬಾರಿ ನೋಡಿದ್ದೇವೆ. ಈ ಅನುಭವ ಸಾಮಾನ್ಯವಾಗಿ ಎಲ್ಲರಿಗೂ ಆಗಿರುತ್ತದೆ. ಆದರೆ, ನಾಯಿಗಳೇಕೆ ಹೀಗೆ ಬೆನ್ನಟ್ಟಿಕೊಂಡು ಬರುತ್ತವೆ ಅನ್ನೋದರ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಇದರ ಹಿಂದೆ ನಿರ್ದಿಷ್ಟ ಕಾರಣಗಳಿವೆ ಎನ್ನುತ್ತಾರೆ ಪ್ರಾಣಿ ಸಂಶೋಧಕರು.
ನಾಯಿಗಳು ಸ್ನೇಹಜೀವಿ. ಸಾಕು ಪ್ರಾಣಿ ಕೂಡ ಹೌದು. ಆದರೆ, ರಸ್ತೆಯಲ್ಲಿ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ನಮ್ಮನ್ನು ಅಟ್ಟಿಸಿಕೊಂಡು ಬರಲು ನಿರ್ದಿಷ್ಟ ಕಾರಣ ಇರಬೇಕಲ್ಲವೇ? ಹೌದು, ಅದಕ್ಕೆ ನಿರ್ದಿಷ್ಟ ಕಾರಣಗಳಿವೆ ಎನ್ನುವ ಪ್ರಾಣಿ ಸಂಶೋಧಕರು, ಬೈಕ್ನಲ್ಲಿ ತೆರಳುವಾಗ ಇಂತಹ ಘಟನೆಗಳಾಗುವುದು ತುಸು ಹೆಚ್ಚೇ. ನಾಯಿ ಬೊಗಳುತ್ತಾ ಬರುತ್ತಿದ್ದಂತೆ ಬೈಕ್ ಸವಾರರು ಜೀವ ಭಯದಲ್ಲಿ ಆಕ್ಸಿಲೇಟರ್ (ವೇಗೋತ್ಕರ್ಷಕ) ಅನ್ನು ಜೋರಾಗಿ ತಿರುವಿ ಪಾರಾಗುವ ಭರದಲ್ಲಿ ಅಪಘಾತಕ್ಕೀಡಾದ ಸಂದರ್ಭಗಳು ಸಾಕಷ್ಟಿವೆ. ಆದರೆ, ಇದರ ಹಿಂದಿನ ಕಾರಣ ತಿಳಿದುಕೊಂಡರೆ ಸುರಕ್ಷಿತವಾಗಿ ಚಲಿಸಬಹುದು ಎಂದು ಕೆಲವು ಸಲಹೆಗಳನ್ನು ನೀಡಿದ್ದಾರೆ.
ಬಲವಾದ ವಾಸನೆ: ವಾಸನೆಯನ್ನು ಪತ್ತೆ ಹಚ್ಚುವುದರಲ್ಲಿ ನಾಯಿಗಳು ಮನುಷ್ಯನಿಗಿಂತ ತುಸು ಮುಂದು. ದೂರದಲ್ಲಿರುವ ಸತ್ತ ಪ್ರಾಣಿಗಳ ವಾಸನೆಯನ್ನು ಇದ್ದಲ್ಲಿಯೇ ಗ್ರಹಿಸಬಲ್ಲ ಪ್ರಾಣಿ ಕೂಡ ಹೌದು. ಮನುಷ್ಯನ ಬಳಿ ಬಂದಾಗ ಅಥವಾ ವಾಹನಗಳು ತೆರಳುತ್ತಿದ್ದಾಗ ಮೊದಲು ತನ್ನ ಮೂಗಿನಿಂದ ವಾಸನೆಯನ್ನು ಹೀರುತ್ತಾ ಗುರುತಿಸಬಲ್ಲದು. ಇತರ ನಾಯಿಗಳ ಚಲನವಲನ ಕೂಡ ಗ್ರಹಿಸಬಲ್ಲವು. ನಾವು ಎಲ್ಲೆಂದರಲ್ಲಿ ನಮ್ಮ ಕಾರು ಅಥವಾ ಬೈಕ್ ನಿಲ್ಲಿಸಿದಾಗ ನಾಯಿಗಳು ವಾಹನಗಳ ಟೈರ್ ಮೇಲೆ ಮೂತ್ರ ಮಾಡುವ ದೃಶ್ಯವನ್ನು ಗಮನಿಸಿರುತ್ತೇವೆ. ಅಸಲಿಗೆ ನಮ್ಮನ್ನು ಅಟ್ಟಿಸಿಕೊಂಡು ಬರಲು ಕಾರಣವೇ ಇದು ಎನ್ನುತ್ತಾರೆ ಪ್ರಾಣಿ ಸಂಶೋಧಕರು.
ಅಟ್ಟಿಸಿಕೊಂಡು ಬರಲು ಕಾರಣ: ವಾಸನೆ ಗ್ರಹಿಕೆಯ ಜೊತೆಗೆ ನಾಯಿಗಳ ನೆನಪಿನ ಶಕ್ತಿ ಕೂಡ ಮೆಚ್ಚುವಂತಹದ್ದು. ಹೊಸಬರು ಬಂದಾಗ ಅಥವಾ ಅಪರಿಚಿತ ವಾಹನ ಬರುತ್ತಿದ್ದಂತೆ ದೂರದಿಂದಲೇ ಗಮನಿಸಿ ಬೊಗಳಲು ಆರಂಭಿಸುತ್ತದೆ. ಮೂತ್ರ ಮಾಡಿದ ವಾಹನದ ಟೈರ್ ವಾಸನೆಯನ್ನು ದೂರದಿಂದಲೇ ಪತ್ತೆ ಹಚ್ಚುತ್ತವೆ. ಆಗ ಅವು ಬೇರೆ ನಾಯಿಗಳೆಂದು ಭಾವಿಸಿಕೊಂಡು ನಮ್ಮನ್ನು ಅಟ್ಟಿಸಿಕೊಂಡು ಬರುತ್ತವೆ. ಒಂದು ಕಾಲೊನಿಯ ನಾಯಿ ಮತ್ತೊಂದು ಕಾಲೋನಿಗೆ ಹೋದಾಗ ಎಲ್ಲಾ ನಾಯಿಗಳು ಸೇರಿ ಅದನ್ನು ಓಡಿಸುವುದನ್ನು ನಾವು-ನೀವು ನೋಡುರುತ್ತೇವೆ. ತಾವಿರುವ ಜಾಗದಲ್ಲಿ ಇನ್ನೊಂದು ನಾಯಿ ಬರುವುದು ಅವು ಸಹಜವಾಗಿ ವಿರೋಧಿಸುತ್ತವೆ. ಕಾರು ಅಥವಾ ಬೈಕಿನ ಟೈರ್‌ನಿಂದ ಮತ್ತೊಂದು ನಾಯಿಯ ಮೂತ್ರದ ವಾಸನೆ ಕಂಡು ತಮ್ಮ ಕಾಲೋನಿಗೆ ಹೊಸ ನಾಯಿ ಬಂದಿದೆ ಎಂದು ಅವು ಭಾವಿಸಿಕೊಳ್ಳುತ್ತವೆ. ಹಾಗಾಗಿಯೇ ವಾಹನದ ಹಿಂದೆ ಓಡುತ್ತವೆ. ಆದರೆ, ಅಂತಹ ಸಮಯದಲ್ಲಿ ಹಲವರು ಆತಂಕಕ್ಕೊಳಗಾಗುತ್ತಾರೆ. ಕೆಲವರು ವೇಗವಾಗಿ ಚಾಲನೆ ಮಾಡುತ್ತಾರೆ. ಇದರಿಂದ ಅನಾಹುತಗಳು ಸಂಭವಿಸಬಹುದು. ಆದರೆ, ಹೀಗೆ ಮಾಡದಿರಿ ಅನ್ನೋದು ಪ್ರಾಣಿ ಸಂಶೋಧಕರ ಸಲಹೆ.
ಅಟ್ಟಿಸಿಕೊಂಡು ಬಂದಾಗ ಏನು ಮಾಡಬೇಕು?: ನಾಯಿಗಳು ಅಟ್ಟಿಸಿಕೊಂಡು ಬಂದಾಗ ಕೆಲವರು ಅರಚುತ್ತಾರೆ. ಇನ್ನು ಕೆಲವರು ಭಯದಲ್ಲಿ ಕಾರು ಅಥವಾ ಬೈಕ್ ಅನ್ನು ವೇಗವಾಗಿ ಓಡಿಸಲು ಪ್ರಾರಂಭಿಸುತ್ತಾರೆ. ಆಗ ನಾಯಿಗಳ ಬೊಗಳುವಿಕೆ ಮತ್ತಷ್ಟು ಜೋರಾಗುತ್ತದೆ. ಅನುಮಾನ ಹೆಚ್ಚಾದಂತೆ ಅಟ್ಟಿಸಿಕೊಂಡು ಬರುತ್ತವೆ. ನಾಯಿಗಳು ವಾಹನಗಳನ್ನು ಹಿಂಬಾಲಿಸಲು ಇನ್ನೊಂದು ಕಾರಣವಿದೆ. ವಾಹನಗಳಿಂದ ಯಾವುದೇ ವಿಚಿತ್ರ ಶಬ್ದ ಕೇಳಿದರೂ ನಾಯಿಗಳು ಬೆನ್ನಟ್ಟುತ್ತವೆ. ಕೆಲವರು ದ್ವಿಚಕ್ರ ವಾಹನದಲ್ಲಿ ಓಡಾಡುತ್ತಾ ವಿಚಿತ್ರ ಶಬ್ದಗಳನ್ನು ಮಾಡುತ್ತಾರೆ. ಅಂತಹ ಸಂದರ್ಭಗಳಲ್ಲಿಯೂ ನಾಯಿಗಳು ಬೆನ್ನಟ್ಟುತ್ತವೆ. ಇಂತಹ ಸಂದರ್ಭದಲ್ಲಿ ವಾಹನ ಸವಾರರು ಗೊಂದಲಕ್ಕೆ ಒಳಗಾಗದೇ ಜಾಣತನ ವಹಿಸಬೇಕು. ನಿಧಾನವಾಗಿ ವಾಹನ ಚಾಲನೆ ಮಾಡುವ ಮೂಲಕ ನಾಯಿಗಳಿಗೆ ಹಾಗೂ ತಮಗೆ ಯಾವುದೇ ಅನಾಹುತ ಆಗದಂತೆ ಸಾಗಬೇಕು ಎನ್ನುತ್ತಾರೆ ಪ್ರಾಣಿ ಸಂಶೋಧಕರು.
ಇದನ್ನೂ ಓದಿ: ಬೀದಿ ನಾಯಿ ದಾಳಿಗೆ ತುತ್ತಾದವರಿಗೆ 5 ಸಾವಿರ, ಸಾವನ್ನಪ್ಪಿದವರಿಗೆ 5 ಲಕ್ಷ ಪರಿಹಾರ: ಸರ್ಕಾರದಿಂದ ಮಾಹಿತಿ