ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದೆ. ಇದುವರೆಗೆ ಯಾವುದೇ ಅಭ್ಯರ್ಥಿ ನಾಮಪತ್ರ ಸಲ್ಲಿಸಿಲ್ಲ. ಈ ನಡುವೆ ಮಲ್ಲಿಕಾರ್ಜುನ ಖರ್ಗೆ ಕೂಡ ಅಧ್ಯಕ್ಷ ಸ್ಥಾನದ ರೇಸ್‌ಗೆ ಸೇರ್ಪಡೆಯಾಗಿದ್ದಾರೆ. ಆದರೆ ಈ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದ ದಿಗ್ವಿಜಯ್ ಸಿಂಗ್ ಅಧ್ಯಕ್ಷ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಈ ರೇಸ್‌ನಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಉಳಿದಿದ್ದು, ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಹಿಂಪಡೆಯಲು ಅಕ್ಟೋಬರ್ 8 ಕೊನೆಯ ದಿನವಾಗಿದೆ.
ಕಾಂಗ್ರೆಸ್ ಅಧ್ಯಕ್ಷ ರೇಸ್‌ನಲ್ಲಿ ಮನೀಷ್ ತಿವಾರಿ: ಇದೇ ವೇಳೆ ಜಿ-23 ಗುಂಪಿನಿಂದ ಪ್ರತ್ಯೇಕ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಚರ್ಚೆಯೂ ಆರಂಭವಾಗಿದೆ. ಮನೀಷ್ ತಿವಾರಿ ಈಗಾಗಲೇ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಈ ರೇಸ್‌ನಿಂದ ಹೊರಗಿಟ್ಟಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಮುನ್ನ ಕಾಂಗ್ರೆಸ್ ಸಂಸದ ಶಶಿ ತರೂರ್ ರಾಜ್ ಘಾಟ್ ತಲುಪಿದರು. ಇಲ್ಲಿ ಅವರು ಮಹಾತ್ಮ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಇಂದು ಮಧ್ಯಾಹ್ನ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅಥವಾ ಇನ್ನಾವುದೇ ದಲಿತ ಮುಖವನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿ ಮಾಡಬಹುದು ಎಂದು ಮೂಲಗಳು ಹೇಳುತ್ತವೆ.
ಖರ್ಗೆ ಬಗ್ಗೆ ಸೋನಿಯಾ ಅಂತಿಮ ನಿರ್ಧಾರ: ಮಲ್ಲಿಕಾರ್ಜುನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಕುರಿತು ಸೋನಿಯಾ ಗಾಂಧಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಖರ್ಗೆ ಅವರು 8 ಬಾರಿ ಶಾಸಕರಾಗಿ, ಎರಡು ಬಾರಿ ಲೋಕಸಭೆ ಮತ್ತು ಒಂದು ಬಾರಿ ರಾಜ್ಯಸಭಾ ಸಂಸದರಾಗಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಮಾತ್ರ ಸೋತಿದ್ದಾರೆ.
ಖರ್ಗೆ ದಲಿತ ನಾಯಕ, ಅವರು ಕರ್ನಾಟಕದ ಮಾಜಿ ರಾಜ್ಯಾಧ್ಯಕ್ಷರು ಮತ್ತು ಕೇಂದ್ರ ಸಚಿವರೂ ಆಗಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸುವ ಎಲ್ಲ ಸಾಧ್ಯತೆಗಳಿವೆ. ಗುರುವಾರ ರಾಜ್ಯದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸದಿರುವುದು ಮತ್ತು ಸಂಬಂಧಿತ ಬೆಳವಣಿಗೆಗಳಿಗಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗುರುವಾರ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರಲ್ಲಿ ಕ್ಷಮೆಯಾಚಿಸಿದರು. ಬಳಿಕ ಪಕ್ಷದ ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿದರು.
ಸೋನಿಯಾ ಗಾಂಧಿಯನ್ನು ಭೇಟಿಯಾದ ರಾಜಸ್ಥಾನ ನಾಯಕರು: ಸೋನಿಯಾ ಗಾಂಧಿ ಅವರ ನಿವಾಸ '10 ಜನಪಥ್'ದಲ್ಲಿ ಭೇಟಿಯಾದ ನಂತರ ಗೆಹ್ಲೋಟ್ ಅವರು ನಾನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ. ನಾನು ಮುಖ್ಯಮಂತ್ರಿಯಾಗಿ ಮುಂದುವರಿಯುವ ಬಗ್ಗೆ ಕಾಂಗ್ರೆಸ್ ಅಧ್ಯಕ್ಷರು ನಿರ್ಧರಿಸುತ್ತಾರೆ ಎಂದು ಹೇಳಿದರು.
ಸೋನಿಯಾ ಗಾಂಧಿಯವರೊಂದಿಗೆ ಗೆಹ್ಲೋಟ್ ಭೇಟಿಯಾದ ಕೆಲವೇ ಗಂಟೆಗಳ ನಂತರ ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಕೂಡ ಭೇಟಿಯಾದರು. ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ನಂತರ ಪೈಲಟ್, ರಾಜಸ್ಥಾನದಲ್ಲಿನ ಬೆಳವಣಿಗೆಗಳ ಬಗ್ಗೆ ತಮ್ಮ ಭಾವನೆಗಳನ್ನು ಮತ್ತು ಪ್ರತಿಕ್ರಿಯೆಯನ್ನು ಕಾಂಗ್ರೆಸ್ ಅಧ್ಯಕ್ಷರಿಗೆ ತಿಳಿಸಿದ್ದೇನೆ. ಈ ವೇಳೆ ಸೋನಿಯಾ ಗಾಂಧಿ ಸಕಾರಾತ್ಮಕ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೇಳೋದ್ದೇನು: ರಾಜಸ್ಥಾನಕ್ಕೆ ಸಂಬಂಧಿಸಿದ ರಾಜಕೀಯ ಬೆಳವಣಿಗೆಗಳ ನಡುವೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಮುಖ್ಯಮಂತ್ರಿ ಕುರಿತು ಸೋನಿಯಾ ಗಾಂಧಿ ಇನ್ನೆರಡು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ನಾನು ಸೋನಿಯಾ ಬಳಿ ಕ್ಷಮೆ ಕೇಳಿದ್ದೇನೆ ಎಂದ ಗೆಹ್ಲೋಟ್: ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಗೆಹ್ಲೋಟ್ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಕಳೆದ 50 ವರ್ಷಗಳಿಂದ ಕಾಂಗ್ರೆಸ್‌ನ ನಿಷ್ಠಾವಂತ ಸೈನಿಕನಾಗಿದ್ದೇನೆ. ಎರಡು ದಿನಗಳ ಹಿಂದೆ ನಡೆದ ಘಟನೆ ನಮ್ಮೆಲ್ಲರನ್ನು ಬೆಚ್ಚಿಬೀಳಿಸಿದೆ. ನಾನು ಅನುಭವಿಸುತ್ತಿರುವ ನೋವು ನನಗೆ ಮಾತ್ರ ತಿಳಿಯುತ್ತದೆ. ನಾನು ಮುಖ್ಯಮಂತ್ರಿಯಾಗಿ ಮುಂದುವರಿಯಲು ಬಯಸುತ್ತೇನೆ ಎಂಬ ಸಂದೇಶ ಇಡೀ ದೇಶಕ್ಕೆ ಹೋಗಿದೆ.
ಆದ್ದರಿಂದ ಇದೆಲ್ಲವೂ ನಡೆಯುತ್ತಿದೆ. ದುರದೃಷ್ಟವಶಾತ್ ನಿರ್ಣಯವನ್ನು ಅಂಗೀಕರಿಸಲಾಗದಂತಹ ಪರಿಸ್ಥಿತಿ ಉದ್ಭವಿಸಿದೆ. ನಾನು ಮುಖ್ಯಮಂತ್ರಿ ಮತ್ತು ಶಾಸಕಾಂಗ ಪಕ್ಷದ ನಾಯಕ, ಆದರೆ ಈ ನಿರ್ಣಯವನ್ನು ಅಂಗೀಕರಿಸಲು ಸಾಧ್ಯವಾಗಲಿಲ್ಲ. ನಾನು ಈ ಬಗ್ಗೆ ಯಾವಾಗಲೂ ದುಃಖಿತನಾಗಿರುತ್ತೇನೆ. ನಾನು ಸೋನಿಯಾ ಅವರಲ್ಲಿ ಕ್ಷಮೆ ಕೇಳಿದ್ದೇನೆ ಎಂದು ಗೆಹ್ಲೋಟ್ ಹೇಳಿದ್ದಾರೆ.
ಕರ್ನಾಟಕಕ್ಕೆ ಎಂಟ್ರಿ ಕೊಟ್ಟ ರಾಹುಲ್ ಗಾಂಧಿ: ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಮೂಲಕ ಕರ್ನಾಟಕಕ್ಕೆ ಎಂಟ್ರಿಕೊಟ್ಟಿದ್ದಾರೆ. ಅವರು ಶಾಂತಿ, ಸಾಮರಸ್ಯ ಮತ್ತು ಸಹೋದರತ್ವದ ಸಂದೇಶವನ್ನು ಸಾರುತ್ತಿದ್ದಾರೆ. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ಸ್ಪರ್ಧಿಸುವಂತೆ ನಾನು ರಾಹುಲ್ ಜೀ ಅವರನ್ನು ಕೇಳಿದ್ದೆ. ಆಗ ಅವರು ನಿರಾಕರಿಸಿದರು. ಆಗ ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಹೇಳಿದೆ. ಆದರೆ ಈಗ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನಾನು ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಬಿಡುವುದು ಸೋನಿಯಾ ಗಾಂಧಿ ಅವರು ನಿರ್ಧರಿಸುತ್ತಾರೆ ಎಂದು ಗೆಹ್ಲೋಟ್ ಹೇಳಿದ್ದಾರೆ.
ಚುರುಕಿನಿಂದ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರಿಯೆ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಅವರು ಇಲ್ಲಿನ ಜೋಧ್‌ಪುರ ಹೌಸ್‌ನಲ್ಲಿ ಗೆಹ್ಲೋಟ್ ಅವರನ್ನು ಭೇಟಿಯಾದರು. ಮತ್ತೊಂದೆಡೆ, ಕಾಂಗ್ರೆಸ್‌ನ ಶಿಸ್ತು ಕ್ರಮ ಸಮಿತಿ ಮುಖ್ಯಸ್ಥ ಎಕೆ ಆಂಟನಿ ಅವರು ಸಮಿತಿಯ ಸದಸ್ಯ ಕಾರ್ಯದರ್ಶಿ ತಾರಿಕ್ ಅನ್ವರ್ ಅವರೊಂದಿಗೆ ಕೇರಳ ಭವನದಲ್ಲಿ ಸಭೆ ನಡೆಸಿದರು.
ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರು ದಿಗ್ವಿಜಯ್ ಸಿಂಗ್ ಅವರನ್ನು ಭೇಟಿ ಮಾಡಿದರು. ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ಘೋಷಿತ ವೇಳಾಪಟ್ಟಿಯಂತೆ ಸೆ.22ರಂದು ಅಧಿಸೂಚನೆ ಹೊರಡಿಸಲಾಗಿದ್ದು, ನಾಮಪತ್ರ ಸಲ್ಲಿಕೆಗೆ ಸೆ.24ರಿಂದ 30ರವರೆಗೆ ಕಾಲಾವಕಾಶ ನೀಡಲಾಗಿದೆ. ನಾಮಪತ್ರ ಹಿಂಪಡೆಯಲು ಅಕ್ಟೋಬರ್ 8 ಕೊನೆಯ ದಿನವಾಗಿದೆ. ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದಲ್ಲಿ ಅಕ್ಟೋಬರ್ 17 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 19 ರಂದು ಫಲಿತಾಂಶ ಪ್ರಕಟವಾಗಲಿದೆ.
ರಾಜಸ್ಥಾನದಲ್ಲಿ ಉದ್ಭವಿಸಿರುವ ರಾಜಕೀಯ ಬಿಕ್ಕಟ್ಟು ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯ ಮೇಲೆ ಕರಿನೆರಳು ಬಿದ್ದಿದೆ. ಭಾನುವಾರ ಸಂಜೆ ಜೈಪುರದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿತ್ತು. ಆದರೆ ಗೆಹ್ಲೋಟ್ ಪರ ಶಾಸಕರು ಅದಕ್ಕೆ ಹಾಜರಾಗಲಿಲ್ಲ. ಪಕ್ಷದ ವೀಕ್ಷಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್ ಮಾಕನ್ ಅವರು ಮಂಗಳವಾರ ಇದನ್ನು ‘ಘೋರ ಅಶಿಸ್ತು’ ಎಂದು ಬಣ್ಣಿಸಿದ್ದಾರೆ.
ಗೆಹ್ಲೋಟ್‌ಗೆ ನಿಕಟವಾಗಿರುವ ಮೂವರು ನಾಯಕರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಇದಾದ ಕೆಲವೇ ದಿನಗಳಲ್ಲಿ ಅವರಿಗೆ ಪಕ್ಷದ ಶಿಸ್ತು ಕ್ರಿಯಾ ಸಮಿತಿಯಿಂದ ‘ಶೋಕಾಸ್ ನೋಟಿಸ್’ ಜಾರಿ ಮಾಡಲಾಗಿತ್ತು. ಈ ಮೂಲಕ ರಾಜಸ್ಥಾನ ರಾಜಕೀಯ ಬಿಕ್ಕಟ್ಟು ಇನ್ನು ಮುಂದುವರಿದಿದೆ.