ನವದೆಹಲಿ: ಮೆಟಾ ಒಡೆತನದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್ಆ್ಯಪ್ ಸೋಮವಾರ ಹೊಸ 'ಆಕ್ಸಿಡೆಂಟಲ್ ಡಿಲೀಟ್' ಫೀಚರ್ ಅನ್ನು ಪರಿಚಯಿಸಿದೆ. ಇದು ಖಾಸಗಿತನ ರಕ್ಷಣೆಯ ಹೊಸ ಫೀಚರ್ ಆಗಿದೆ. ತಪ್ಪಾದ ವ್ಯಕ್ತಿ ಅಥವಾ ಗುಂಪಿಗೆ ಸಂದೇಶ ಕಳುಹಿಸಿದಾಗ ಮತ್ತು ಆಕಸ್ಮಿಕವಾಗಿ 'ಡಿಲೀಟ್ ಫಾರ್ ಎವೆರಿವನ್' ಬದಲಿಗೆ 'ಡಿಲೀಟ್ ಫಾರ್ ಮಿ' ಅನ್ನು ಕ್ಲಿಕ್ ಮಾಡಿದಾಗ ಮುಜುಗರದ ಸನ್ನಿವೇಶ ಎದುರಾಗುತ್ತದೆ. ಇದನ್ನು ತಪ್ಪಿಸಲು ಹೊಸ ಫೀಚರ್ ಸಹಾಯಕವಾಗಲಿದೆ.
ಆ್ಯಕ್ಸಿಡೆಂಟಲ್ ಡಿಲೀಟ್ (ಆಕಸ್ಮಿಕ ಅಳಿಸುವಿಕೆ) ವೈಶಿಷ್ಟ್ಯವು ಬಳಕೆದಾರರಿಗೆ ಐದು ಸೆಕೆಂಡುಗಳ ಸಮಯಾವಕಾಶವನ್ನು ಒದಗಿಸುವ ಮೂಲಕ ಆಕಸ್ಮಿಕವಾಗಿ ಸಂದೇಶ ಅಳಿಸುವಿಕೆಯನ್ನು ಅನ್ ಡು ಮಾಡಲು ಮತ್ತು ಡಿಲೀಟ್ ಫಾರ್ ಎವೆರಿವನ್ ಕ್ಲಿಕ್ ಮಾಡಲು ಅವಕಾಶ ನೀಡುತ್ತದೆ. ಇದನ್ನು ಇನ್ನಷ್ಟು ಸ್ಪಷ್ಟವಾಗಿ ಹೇಳಬೇಕೆಂದರೆ- ನೀವು ಒಂದು ಮೆಸೇಜ್ ಅನ್ನು ಡಿಲೀಟ್ ಮಾಡಲು ಡಿಲೀಟ್ ಫಾರ್ ಮಿ ಕ್ಲಿಕ್ ಮಾಡುತ್ತೀರಿ ಎಂದಿಟ್ಟುಕೊಳ್ಳಿ. ಆದರೆ ನಿಮಗೆ ವಾಸ್ತವದಲ್ಲಿ ಡಿಲೀಟ್ ಫಾರ್ ಎವೆರಿವನ್ ಮಾಡಬೇಕಿರುತ್ತದೆ. ಹೀಗಾದಾಗ ನೀವು ಡಿಲೀಟ್ ಫಾರ್ ಮಿ ಅನ್ ಡು ಮಾಡಿ, ಡಿಲೀಟ್ ಫಾರ್ ಎವೆರಿವನ್ ಕ್ಲಿಕ್ ಮಾಡಬಹುದು.
ಆ್ಯಕ್ಸಿಡೆಂಟಲ್ ಡಿಲೀಟ್ ಫೀಚರ್ Android ಮತ್ತು iPhone ಸಾಧನಗಳ ಎಲ್ಲ ಬಳಕೆದಾರರಿಗೆ ಲಭ್ಯವಿದೆ. ಕಳೆದ ತಿಂಗಳು, ವಾಟ್ಸ್ಆ್ಯಪ್ ಭಾರತದಲ್ಲಿ ಹೊಸ 'ಮೆಸೇಜ್ ಯುವರ್‌ಸೆಲ್ಫ್' ಫೀಚರ್ ಆರಂಭಿಸಿತ್ತು. ಇದು ನಿಮಗೆ ನೀವೇ ಟಿಪ್ಪಣಿಗಳು, ಜ್ಞಾಪನೆಗಳು ಮತ್ತು ನವೀಕರಣಗಳನ್ನು ಕಳುಹಿಸಿಕೊಳ್ಳುವ ಫೀಚರ್ ಆಗಿದೆ.
ಇದನ್ನೂ ಓದಿ: ಭಾರತದಲ್ಲಿ 23 ಲಕ್ಷ ನಕಲಿ ವಾಟ್ಸ್ಆ್ಯಪ್ ಖಾತೆಗಳ ಬ್ಯಾನ್ ಮಾಡಿದ ಮೆಟಾ