ಹೈದರಾಬಾದ್: ತೆಲಂಗಾಣ ರಾಜ್ಯವು ದೇಶದಲ್ಲೇ ಮಾದರಿ ರಾಜ್ಯವಾಗಿದೆ. ಒಂದೊಮ್ಮೆ ದೇಶಕ್ಕೆ ಆಪತ್ತು ಬಂದರೆ ತೆಲಂಗಾಣ ಸುಮ್ಮನೆ ಕೂರಲಾರದು ಎಂದು ಹೇಳಿದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ದೇಶದಲ್ಲಿ ಗುಣಾತ್ಮಕ ಬದಲಾವಣೆಗಾಗಿ ಟಿಆರ್ಎಸ್ ರಾಷ್ಟ್ರೀಯ ಪಕ್ಷವಾದರೆ ತಪ್ಪೇನು ಎಂದು ಪ್ರಶ್ನಿಸಿದರು.
ದೇಶ ಬಿಜೆಪಿ ನಾಯಕರಿಗೆ ಮಾತ್ರ ಸೇರಿದೆಯೇ ಎಂದು ಪ್ರಶ್ನಿಸಿದ ಕೆಸಿಆರ್, ದೇಶದಲ್ಲಿ ಟಿಆರ್ಎಸ್ನಂಥ ಸರಕಾರ ಬಂದರೆ ಪ್ರತಿ ಎಕರೆಗೂ ನೀರು ಕೊಡಬಹುದು. ಇದು ನಮ್ಮ ಸರ್ಕಾರದ ಅನ್ವೇಷಣೆಯಾಗಿದೆ ಎಂದು ವಿವರಿಸಿದರು. ಸುಮಾರು ಎರಡೂವರೆ ತಾಸುಗಳ ಕಾಲ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
"ಅಂದು ತೆಲಂಗಾಣಕ್ಕಾಗಿ ಹೋರಾಡಿ ಸಾಧಿಸಿದ್ದೇನೆ. ಈಗ ದೇಶಕ್ಕಾಗಿ ಹೋರಾಡುತ್ತೇನೆ. ಅಂದು ಕಾಂಗ್ರೆಸ್, ಬಿಜೆಪಿ, ಚಂದ್ರಬಾಬು, ಮತ್ತು ಸಿಪಿಐನವರು ಜೈ ತೆಲಂಗಾಣ ಎಂಬ ಘೋಷಣೆ ಕೂಗುವಂತೆ ಮಾಡಿದ್ದೇನೆ. ರಾಷ್ಟ್ರೀಯ ಪಕ್ಷದ ಬಗ್ಗೆ ಅಂತಿಮ ನಿರ್ಧಾರವನ್ನು ಪ್ರಕಟಿಸಿದರೆ ಎಲ್ಲರೂ ನನ್ನೊಂದಿಗೆ ಬರಲಿದ್ದಾರೆ. ಕೃಷಿ ಭೂಮಿ ಬಿಟ್ಟು ನನ್ನ ಬಳಿ ಬೇರೆ ಆಸ್ತಿ ಇಲ್ಲ. ನಮ್ಮ ಸಚಿವರು, ಶಾಸಕರು ತಪ್ಪು ಮಾಡಿಲ್ಲ ಮತ್ತು ಹಗರಣಗಳು ನಡೆದಿಲ್ಲ. ಗಜ್ವೇಲ್ನಲ್ಲಿ ನನ್ನ ವಿರುದ್ಧ ಸ್ಪರ್ಧಿಸಿ ನನ್ನನ್ನು ಸೋಲಿಸುತ್ತೇನೆ ಎನ್ನುವವರು ಮೂರ್ಖರು" ಎಂದರು ಕೆಸಿಆರ್.
"ಮೋದಿಯವರ ಆಡಳಿತದಲ್ಲಿ ಕಾರ್ಪೊರೇಟ್‌ಗಳು ಮಾತ್ರ ಲಾಭ ಪಡೆದರು. ಮೋದಿಯವರ ಒತ್ತಡಕ್ಕೆ ಮಣಿದು ತನ್ನ ಸ್ನೇಹಿತನಿಗೆ ವಿದ್ಯುತ್ ಯೋಜನೆಯ ಗುತ್ತಿಗೆ ನೀಡಲಾಗಿದೆ ಎಂದು ಸ್ವತಃ ಶ್ರೀಲಂಕಾ ವಿದ್ಯುತ್ ಮಂಡಳಿ ಅಧ್ಯಕ್ಷರೇ ಹೇಳಿದ್ದಾರೆ. ದೇಶದಲ್ಲಿ ಪ್ರಸ್ತುತ ಇದರ ಬಗ್ಗೆ ಆಕ್ರೋಶ ಉಂಟಾಗಿದೆ. ಈ ಬಗ್ಗೆ ಮೋದಿ ಏಕೆ ಮೌನವಾಗಿದ್ದಾರೆ? ನಿಯಮಾವಳಿಗಳ ಹೆಸರಿನಲ್ಲಿ ರಾಜ್ಯಗಳ ಪ್ರಗತಿಗೆ ಅಡ್ಡಿ ಮಾಡಲಾಗುತ್ತಿದೆ. ತಮ್ಮೊಂದಿಗೆ ಚೆನ್ನಾಗಿದ್ದರೆ ಮಾತ್ರ ಹಣ ನೀಡುವುದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ.
ತೆಲಂಗಾಣದಲ್ಲಿ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳನ್ನು ತಡೆಯಲು ಕೇಂದ್ರ ಷಡ್ಯಂತ್ರ ನಡೆಸುತ್ತಿದೆ. ಅಗ್ನಿಪಥ ಯೋಜನೆಯಿಂದ ಯುವಜನತೆ ಹಾಗೂ ಇಡೀ ದೇಶದ ಭವಿಷ್ಯ ಅತಂತ್ರವಾಗಿದೆ. ಯುವಕರಿಂದ ಸೈನ್ಯವನ್ನು ಕಟ್ಟಲಾಗುವುದು ಎಂದು ಹೇಳಲಾಗುತ್ತಿದೆ. ಆದರೆ ಕೇಂದ್ರ ಸಚಿವ ಸಂಪುಟದ ಶೇ 50ರಷ್ಟು ಮಂದಿ ವೃದ್ಧರು. ಅವರನ್ನು ತೆಗೆದು ಹಾಕಿ ಯುವಕರಿಗೆ ಅವಕಾಶ ನೀಡಬೇಕು. ಮೋದಿಗೂ ವಯಸ್ಸಾಗಿದೆ, ಅವರನ್ನೂ ತೆಗೆದು ಯುವ ಪ್ರಧಾನಿಯನ್ನು ನೇಮಿಸಬೇಕು.
ಹಿಂದೂಗಳ ಪವಿತ್ರ ಕ್ಷೇತ್ರವಾದ ಕಾಶಿಯನ್ನೂ ಮೋದಿ ತಮ್ಮ ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ. ಘಾಟ್‌ಗಳನ್ನು ನಟ್ ಮತ್ತು ಬೋಲ್ಟ್‌ಗಳಿಂದ ನಿರ್ಮಿಸಲಾಗಿದೆ. ನಾಲ್ಕು ದಿನಗಳ ಹಿಂದೆ ಮಧ್ಯಗೋಪುರದ ಮುಖ್ಯ ಕಂಬ ಬಿದ್ದಿತ್ತು'' ಎಂದು ಕೆಸಿಆರ್ ವಾಗ್ದಾಳಿ ನಡೆಸಿದರು.