ಕೋಲ್ಕತ್ತಾ (ಪಶ್ಚಿಮ ಬಂಗಾಳ): ತೀವ್ರ ಸಂಘರ್ಷ, ರಕ್ತಪಾತದ ನಡುವೆ ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಭರ್ಜರಿ ಗೆಲುವು ಸಾಧಿಸಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಿರುವ ಟಿಎಂಸಿ ಹಲವು ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿಗಳಲ್ಲಿ ಅಧಿಕಾರ ಸ್ಥಾಪನೆ ಮಾಡಲಿದೆ. ಮಂಗಳವಾರ ಬೆಳಗ್ಗೆ ಆರಂಭವಾಗಿರುವ ಮತ ಎಣಿಕೆ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದ್ದು, ಬುಧವಾರ ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ರಾಜ್ಯ ಚುನಾವಣೆ ಆಯೋಗ ತಿಳಿಸಿದೆ.
ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮೂರು ಪಂಚಾಯಿತಿ ಹಂತಗಳಲ್ಲಿ ಸ್ಪಷ್ಟ ಬಹುಮತ ಪಡೆದರೆ, ಎರಡನೇ ಸ್ಥಾನಕ್ಕಾಗಿ ಬಿಜೆಪಿ, ಕಾಂಗ್ರೆಸ್ ಮತ್ತು ಎಡರಂಗ ಮೈತ್ರಿಕೂಟದ ನಡುವೆ ಪೈಪೋಟಿ ಇದೆ. ಟಿಎಂಸಿ 36,665 ಗ್ರಾಮ ಪಂಚಾಯತ್ ಸ್ಥಾನಗಳಲ್ಲಿ ವಿಜಯ ಸಾಧಿಸುವ ಮೂಲಕ ವಿರೋಧ ಪಕ್ಷಗಳಿಗಿಂತ ಬಹಳ ಮುಂದಿದೆ. ಬಿಜೆಪಿ 7,263 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದರೆ, ಕಾಂಗ್ರೆಸ್-ಎಡರಂಗ ಮೈತ್ರಿ 4,208 ಸ್ಥಾನಗಳಲ್ಲಿ (ಕಾಂಗ್ರೆಸ್ 1,811, ಎಡರಂಗ 2,397) ಗೆಲುವು ಸಾಧಿಸಿದೆ.
ಅಖಿಲ ಭಾರತ ಸೆಕ್ಯುಲರ್ ಫ್ರಂಟ್ (ಎಐಎಸ್‌ಎಫ್) ಮತ್ತು ಸ್ವತಂತ್ರರು ಸೇರಿದಂತೆ 1,732 ಸ್ಥಾನಗಳಲ್ಲಿ ವಿಜಯಶಾಲಿಯಾಗಿದ್ದಾರೆ. 744 ಸ್ಥಾನಗಳಲ್ಲಿ ಸಮಾನ ಅತಂತ್ರ ಫಲಿತಾಂಶ ಬಂದಿದೆ. ಇಂತಹ ಕ್ಷೇತ್ರಗಳಲ್ಲಿ ನಾಣ್ಯ ಚಿಮ್ಮು ಮೂಲಕ ವಿಜೇತರನ್ನು ನಿರ್ಧರಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ತಾಲೂಕು, ಜಿಲ್ಲಾ ಪಂಚಾಯಿತಿ ಫಲಿತಾಂಶ: ಎರಡನೇ ಹಂತವಾದ ತಾಲೂಕು ಪಂಚಾಯಿತಿ ಚುನಾವಣಾ ಫಲಿತಾಂಶದಲ್ಲಿ ಟಿಎಂಸಿ 2,319 ಸ್ಥಾನಗಳನ್ನು ಗಳಿಸಿದರೆ, ಬಿಜೆಪಿ 109, ಎಡರಂಗ 39, ಕಾಂಗ್ರೆಸ್ 36 ಮತ್ತು ಇತರರು 2 ಸ್ಥಾನಗಳಲ್ಲಿ ವಿಜಯ ಸಾಧಿಸಿದ್ದಾರೆ. ಜಿಲ್ಲಾ ಪಂಚಾಯಿತಿಗಳಲ್ಲಿ 82 ಸ್ಥಾನಗಳ ಪೈಕಿ ತೃಣಮೂಲ ಕಾಂಗ್ರೆಸ್ 81 ಸ್ಥಾನಗಳಲ್ಲಿ ಗೆಲುವು, ಮುನ್ನಡೆ ಸಾಧಿಸಿದೆ. ಬಿಜೆಪಿ ಒಂದು ಸ್ಥಾನದಲ್ಲಿ ಮಾತ್ರ ಗೆಲುವು ಪಡೆದಿದೆ.
ಅಧಿಕಾರಿ ಹೇಳಿಕೆಗೆ ವ್ಯಂಗ್ಯ: ಪಂಚಾಯತ್ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು, ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಚುನಾವಣಾಪೂರ್ವ ಹೇಳಿಕೆಗೆ ಟಾಂಗ್ ನೀಡಿದ್ದಾರೆ. ಚುನಾವಣಾ ಪ್ರಚಾರದಲ್ಲಿ 'ಸಿಎಂ ಮಮತಾಗೆ ಮತ ನೀಡಬೇಡಿ' ಎಂದು ಕರೆ ನೀಡಲಾಗಿತ್ತು. ಆದರೆ, ಇಂದಿನ ಫಲಿತಾಂಶ 'ಮತ ನೀಡಿ' ಎಂದು ಹೇಳಿದಂತಾಗಿದೆ ಎಂದು ಲೇವಡಿ ಮಾಡಿದ್ದಾರೆ.
ಚುನಾವಣಾ ಸಂಘರ್ಷ: ಪಂಚಾಯತ್ ಚುನಾವಣೆಯು ತೀವ್ರ ಸಂಘರ್ಷಕ್ಕೆ ಕಾರಣವಾಗಿತ್ತು. ನಾಮಪತ್ರ ಸಲ್ಲಿಕೆಯಿಂದ ಹಿಡಿದು ಮತದಾನದವರೆಗೂ ರಾಜಕೀಯ ವೈಷಮ್ಯ ಹೊಗೆಯಾಡಿ, ಈವರೆಗೆ 35ಕ್ಕೂ ಹೆಚ್ಚು ಜನರ ಬಲಿ ಪಡೆದುಕೊಂಡಿದೆ. ನಾಮಪತ್ರ ಸಲ್ಲಿಕೆ ವೇಳೆ ನಡೆದ ಸಂಘರ್ಷದಲ್ಲಿ 14 ಮಂದಿ ಮೃತಪಟ್ಟಿದ್ದರೆ, ಮತದಾನದ ವೇಳೆ 20 ಮಂದಿ ಸಾವಿಗೀಡಾಗಿದ್ದರು. ಬೂತ್ಗಳ ವಶ, ಧ್ವಂಸ, ಹಲ್ಲೆ ಸಂಬಂಧಿಸಿದ ಪ್ರಕರಣಗಳಿಂದ 696 ಬೂತ್ಗಳಲ್ಲಿ ಮರು ಮತದಾನ ನಡೆಸಲಾಗಿತ್ತು.
ಇದನ್ನೂ ಓದಿ: ಪಶ್ಚಿಮ ಬಂಗಾಳದ ಸೂಕ್ಷ್ಮ ಮತಗಟ್ಟೆಗಳ ಬಗ್ಗೆ ಚುನಾವಣಾ ಆಯೋಗ ಮಾಹಿತಿ ನೀಡಿಲ್ಲ: ಬಿಎಸ್‌ಎಫ್