ಕೋಲ್ಕತ್ತಾ( ಪಶ್ಚಿಮ ಬಂಗಾಳ): ಧರ್ಮಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಮತ್ತು ಭದ್ರತಾಪಡೆಗಳ ವಿರುದ್ಧ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೀಡಿರುವ ಹೇಳಿಕೆಗಳು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಮಾಡಿದಂತಾಗಿದೆ. ಹೀಗಾಗಿ 24 ಗಂಟೆ ಪ್ರಚಾರ ನಡೆಸುವುದಕ್ಕೆ ನಿಷೇಧ ಹೇರಿ ಚುನಾವಣಾ ಆಯೋಗವು ಸೋಮವಾರ ಆದೇಶ ಹೊರಡಿಸಿತ್ತು.
ಇನ್ನು ಈ ನಿಷೇಧದಿಂದ ಆಕ್ರೋಶಗೊಂಡ ದೀದಿ, ಆದೇಶವನ್ನು ವಿರೋಧಿಸಿ ಕೊಲ್ಕತ್ತಾದ ಗಾಂಧಿ ಮೂರ್ತಿ ಬಳಿ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ, ನಿಷೇಧ ಜಾರಿ ಮಾಡುವ ಮುನ್ನ ನೋಟಿಸ್ ಕಳುಹಿಸಿದ್ದ ಇಸಿ ವಿರುದ್ಧ ಟೀಕೆಗಳ ಸುರಿಮಳೆಯನ್ನೇ ಹರಿಸುತ್ತಿದ್ದರು. ಇನ್ನು ಚುನಾವಣಾ ಆಯೋಗವನ್ನು ಮೋದಿ ಕೋಡ್ ಆಫ್ ಕಂಡಕ್ಟ್ ಎಂದು ಮರುನಾಮಕರಣ ಮಾಡಬೇಕು ಎಂದು ಟೀಕಿಸಿದ್ದರು.
ಪ್ರತಿಭಟನೆ ವೇಳೆ ಮಮತಾ ಬ್ಯಾನರ್ಜಿ ಪೇಂಟಿಂಗ್ ಮಾಡುತ್ತಿದ್ದು, ಪೇಂಟಿಂಗ್ ಮಾಡಿದ ಚಿತ್ರವನ್ನ ಪ್ರದರ್ಶನ ಕೂಡಾ ಮಾಡಿದರು. ಕೋಲ್ಕತ್ತಾದ ಗಾಂಧಿ ಮೂರ್ತಿ ಎದುರು ಅವರು ಧರಣಿ ಕುಳಿತಿದ್ದು, ಅವರು ಪೇಂಟಿಂಗ್ ಮಾಡಿ ಪ್ರದರ್ಶನ ಮಾಡುತ್ತಿರುವ ದೃಶ್ಯ ಎಲ್ಲರ ಗಮನ ಸೆಳೆಯುತ್ತಿದೆ.
ಆಯೋಗದ ಸ್ಪಷ್ಟನೆ
ಏ.12ರ ರಾತ್ರಿ 8ರಿಂದ ಏ.13 ರಾತ್ರಿ 8ರವರೆಗೆ ಯಾವುದೇ ರೀತಿಯಲ್ಲಿ ಪ್ರಚಾರ ಮಾಡದಂತೆ ಭಾರತ ಚುನಾವಣಾ ಆಯೋಗ ಆದೇಶ ನೀಡಿತ್ತು. ಮಮತಾ ಹೇಳಿಕೆ ರಾಜ್ಯಾದ್ಯಂತ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತಂದಿದೆ. ಹೀಗಾಗಿ ಅವರ ಪ್ರಚಾರದ ಮೇಲೆ ನಿಷೇಧ ಹೇರಲಾಗಿದೆ’ ಎಂದು ಚುನಾವಣಾ ಆಯೋಗವು ಸ್ಪಷ್ಟನೆಯನ್ನು ನೀಡಿದೆ.
‘ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವವರೆಗೂ ಮಮತಾ ಬ್ಯಾನರ್ಜಿ ಇಂತಹ ಹೇಳಿಕೆಗಳನ್ನು ನೀಡಬಾರದು ಎಂದು ಎಚ್ಚರಿಕೆ ನೀಡುತ್ತಿದ್ದೇವೆ’ ಎಂದು ಆಯೋಗವು ಹೇಳಿದೆ.