ಕೋಲ್ಕತ್ತಾ(ಪಶ್ಚಿಮ ಬಂಗಾಳ): ಕೇಂದ್ರ ಚುನಾವಣೆ ಆಯೋಗ ಪಶ್ಚಿಮ ಬಂಗಾಳದ 294 ಕ್ಷೇತ್ರ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದ್ದು, ದೀದಿ ನಾಡಲ್ಲಿ 8 ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ.
ಕೇಂದ್ರ ಚುನಾವಣೆ ಆಯೋಗ ಸುದ್ದಿಗೋಷ್ಠಿ ಮುಕ್ತಾಯಗೊಳ್ಳುತ್ತಿದ್ದಂತೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮಾಧ್ಯಮಗೋಷ್ಠಿ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆ ಆಯೋಗದ ನಿರ್ಧಾರ ನಾನು ಗೌರವಿಸುತ್ತೇನೆ. ಆದರೆ, ಜಿಲ್ಲೆಗಳನ್ನ ಒಡೆದಿರುವುದು ಯಾಕೆ? ಎಂದು ಪ್ರಶ್ನೆ ಮಾಡಿದ್ದಾರೆ. ದಕ್ಷಿಣ 24 ಪರಗಣ ನಮ್ಮ ಭದ್ರಕೋಟೆಯಾಗಿದ್ದು, ಅಲ್ಲಿ ಮತದಾನ ಮೂರು ವಿಭಿನ್ನ ಹಂತಗಳಲ್ಲಿ ನಡೆಯಲಿದೆ. ಮೋದಿ ಮತ್ತು ಶಾ ಅವರ ಅನುಕೂಲಕ್ಕೆ ಅನುಗುಣವಾಗಿ ಇದನ್ನ ಮಾಡಲಾಗಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.
ಕೇಂದ್ರ ಗೃಹ ಸಚಿವರು ದೇಶದ ಹಿತಕ್ಕಾಗಿ ಕೆಲಸ ಮಾಡಬೇಕು. ಚುನಾವಣೆಯಲ್ಲಿ ಅವರ ಅಧಿಕಾರ ದುರುಪಯೋಗ ಪಡೆಸಿಕೊಳ್ಳಬಾರದು. ನಾವು ಪ್ರಧಾನ ಮಂತ್ರಿಯನ್ನ ಸ್ವಾಗತಿಸುತ್ತೇವೆ. ಆದರೆ, ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಅವರು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಪಂಚರಾಜ್ಯ ಚುನಾವಣೆಗೆ ಮುಹೂರ್ತ ಫಿಕ್ಸ್: ಯಾವ ರಾಜ್ಯದಲ್ಲಿ ಯಾವಾಗ ಮತದಾನ: ಸಂಪೂರ್ಣ ವಿವರ ಇಂತಿದೆ
ರಾಜ್ಯ ಚುನಾವಣೆಗಳಲ್ಲಿ ಕೇಂದ್ರ ಸರ್ಕಾರ ತನ್ನ ಅಧಿಕಾರ ದುರುಪಯೋಗ ಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದಿರುವ ಅವರು, ಅದನ್ನ ಮಾಡಿದ್ರೆ ದೊಡ್ಡ ಪ್ರಮಾದವಾಗುತ್ತದೆ. ಜತೆಗೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದಿದ್ದಾರೆ. ನಾವು ಸಾಮಾನ್ಯ ಜನರು, ಯುದ್ಧ ಎದುರಿಸಲು ಸಿದ್ಧ. ಹಣದ ದುರುಪಯೋಗ ಇಲ್ಲಿ ನಡೆಯಲ್ಲ ಎಂದಿರುವ ದೀದಿ, ಬಿಜೆಪಿ ಏಜೆನ್ಸಿಗಳ ಮೂಲಕ ಎಲ್ಲ ಜಿಲ್ಲೆಗಳಿಗೆ ಹಣ ರವಾನೆ ಮಾಡಿದೆ ಎಂದು ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದ ಎಲ್ಲ ಕ್ಷೇತ್ರಗಳಿಗೂ 8 ಹಂತಗಳಲ್ಲಿ ಮತದಾನ ನಡೆಯಲಿದ್ದು, ಮಾರ್ಚ್ 27, ಏಪ್ರಿಲ್ 1,ಏಪ್ರಿಲ್ 6,ಏಪ್ರಿಲ್ 10,ಏಪ್ರಿಲ್ 17,ಏಪ್ರಿಲ್ 22,ಏಪ್ರಿಲ್ 26 ಹಾಗೂ ಏಪ್ರಿಲ್ 29ರಂದು ಮತದಾನ ನಡೆಯಲಿದ್ದು, ಮೇ. 2ರಂದು ಫಲಿತಾಂಶ ಹೊರಬೀಳಲಿದೆ.