ಕೋಲ್ಕತ್ತಾ (ಪಶ್ಚಿಮಬಂಗಾಳ): ಪಶ್ಚಿಮ ಬಂಗಾಳದ ಅತೃಪ್ತ ಬಿಜೆಪಿ ಉಪಾಧ್ಯಕ್ಷ, ಸಂಸದ ಅರ್ಜುನ್ ಸಿಂಗ್ ಭಾನುವಾರ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪಕ್ಷದ ಪ್ರಧಾನ ಕಾರ್ಯಾಧ್ಯಕ್ಷ, ಮಮತಾ ಬ್ಯಾನರ್ಜಿ ಅಳಿಯ ಅಭಿಷೇಕ್ ಬ್ಯಾನರ್ಜಿ ಸಮ್ಮುಖದಲ್ಲಿ ಟಿಎಂಸಿ ಸದಸ್ಯತ್ವ ಪಡೆಯುವ ಮೂಲಕ ಅರ್ಜುನ್ ಸಿಂಗ್ ಅಧಿಕೃತವಾಗಿ ಸೇರಿದ್ದಾರೆ.
ಟಿಎಂಸಿ ಸೇರಿದ ಬಳಿಕ ಮಾತನಾಡಿರುವ ಅವರು, ಎಸಿ ರೂಮ್ನಲ್ಲಿ ಕುಳಿತು ರಾಜಕಾರಣ ಮಾಡಲು ಸಾಧ್ಯವಿಲ್ಲ. ರಾಜಕೀಯ ಮಾಡಲು ಕಣಕ್ಕಿಳಿಯಬೇಕೆಂದು ಹೇಳಿದ್ದಾರೆ. ಅಲ್ಲದೇ, ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ಟಿಎಂಸಿಯಿಂದ ಬಿಜೆಪಿಗೆ ಸೇರಿರುವ ಇಬ್ಬರು ಸಂಸದರು ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ. ನಂತರ ನಾನು ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡುವೆ ಎಂದಿದ್ದಾರೆ.
ಇತ್ತ, ಅರ್ಜುನ್ ಸಿಂಗ್ ಸೇರ್ಪಡೆ ಬಗ್ಗೆ ಟ್ವೀಟ್ ಮಾಡಿರುವ ಅಭಿಷೇಕ್ ಬ್ಯಾನರ್ಜಿ, ಬಿಜೆಪಿಯ ಒಡೆದಾಳುವ ನೀತಿಯನ್ನು ತಿರಸ್ಕರಿಸಿ ಅರ್ಜುನ್ ಸಿಂಗ್ ಟಿಎಂಸಿಗೆ ಬಂದಿದ್ದಾರೆ. ರಾಷ್ಟ್ರದಾದ್ಯಂತ ಜನರು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಿಗೆ ಹಿಂದೆಂದಿಗಿಂತಲೂ ಈಗ ನಮ್ಮ ಅವಶ್ಯಕತೆಯಿದೆ. ಅವರ ಹೋರಾಟವನ್ನು ಜೀವಂತವಾಗಿಡೋಣ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಕೋರಿಕೆ ಈಡೇರಿಸಿದ ಲಕ್ಷ್ಯ ಸೇನ್.. ಮೋದಿಗೆ ಮಿಠಾಯಿ ಗಿಫ್ಟ್!